463 ರೂಪಾಯಿ ಪಾವತಿಸಿ ಬಸ್​ನಲ್ಲಿ ಪ್ರಯಾಣಿಸಿದ ಕೋಳಿ! ಹುಬ್ಬೇರಿಸಿದ ಕಂಡಕ್ಟರ್​

New Project (21)
Published on

ಕೊಪ್ಪಳ: ಸಾಕುಪ್ರಾಣಿ-ಪಕ್ಷಿ ಜತೆ ಬಸ್​ನಲ್ಲಿ ಪ್ರಯಾಣಿಸುವಾಗ ಟಿಕೆಟ್​ ತೆಗೆದುಕೊಳ್ಳೋಕೆ ಹಿಂದು-ಮುಂದು ನೋಡುವ, ಇದೇ ವಿಚಾರಕ್ಕೆ ಕಂಡಕ್ಟರ್​ ಜತೆ ವಾಗ್ವಾದ ನಡೆಸುವುದು ಸಾಮಾನ್ಯ. ಆದರೆ ಇಲ್ಲೊಂದು ಕೋಳಿಯ ಪ್ರಯಾಣಕ್ಕೆ ಬರೋಬ್ಬರಿ 463 ರೂಪಾಯಿಯನ್ನು ಟಿಕೆಟ್​ಗೆ ಪಾವತಿಸಲಾಗಿದೆ.

ಹೌದು, ಪ್ರಯಾಣಿಕರೊಬ್ಬರು ಸೋಮವಾರ ಹೈದರಾಬಾದ್​ನಿಂದ ಗಂಗಾವತಿಗೆ ಬರುವಾಗ ತಮ್ಮೊಡನೆ ಕೋಳಿಯೊಂದನ್ನೂ ತಂದಿದ್ದರು. ಸಾರಿಗೆ ನಿಯಮ ಪ್ರಕಾರ ಪಕ್ಷಿಗಳನ್ನು ಸಾಗಿಸಲು ಅರ್ಧ ಟಿಕೆಟ್​ ಪಡೆದುಕೊಳ್ಳಬೇಕು. ಆದರೆ, ಬಹುಪಾಲು ಜನರು ಬಚ್ಚಿಟ್ಟು ತರುವುದುಂಟು. ಇನ್ನು ಕೆಲವರು ಪಕ್ಷಿಗಳಿಗೆ ಟಿಕೆಟ್​ ಯಾಕೆಂದು ತಗಾದೆ ತೆಗೆಯುವುದು ಸಾಮಾನ್ಯ. ಆದರೆ, ಕೋಳಿ ಮೇಲಿನ ಪ್ರೀತಿಗೆ ಮಾಲೀಕರು 463 ರೂ. ಪಾವತಿಸಿ ಕೋಳಿಗೆ ಟಿಕೆಟ್​ ಪಡೆದು ಪ್ರಯಾಣಿಸಿದ್ದಾರೆ.

ಈ ಟಿಕೆಟ್​ ದರಕ್ಕೆ ಗಂಗಾವತಿಯಲ್ಲೇ ಒಂದು ಕೋಳಿ ಕೊಳ್ಳಬಹುದೆಂದು ನಿರ್ವಾಹಕರು ಮಾಲೀಕರಿಗೆ ನಗುತ್ತಲೇ ಹೇಳಿದ್ದಾರೆ. ಬಸ್​ನಲ್ಲಿದ್ದವರೂ ಕೋಳಿ ಮತ್ತು ಅದರ ಮಾಲೀಕನನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಒಂದು ಕೋಳಿ ಬೆಲೆ 200ರಿಂದ 500ರ ವರೆಗೆ ಇರುತ್ತೆ. ಟಿಕೆಟ್​ಗೆ ಕೊಟ್ಟ ಹಣದಲ್ಲೇ ಇನ್ನೊಂದು ಕೋಳಿಯನ್ನ ಖರೀದಿಸಬಹುದಿತ್ತು. ಆದರೂ ಆ ಕೋಳಿ ಮೇಲೆ ಮಾಲೀಕನಿಗಿದ್ದ ಪ್ರೀತಿಯನ್ನ ಕಂಡು ಅಲ್ಲಿದ್ದವರು ಹುಬ್ಬೇರಿಸಿದ್ದಾರೆ. ಫೋಟೋವನ್ನೂ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇದು ಈಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಸ್ ನಿರ್ವಾಹಕ ಅನೀಶ್, ನಿಯಮದಂತೆ ಕೋಳಿಗೂ ಬಸ್​ ಟಿಕೆಟ್​ ತಗೋಬೇಕು ಎಂದು ಹೇಳಿದೆ. ಅದಕ್ಕೆ ಕೋಳಿ ಮಾಲೀಕ ನಾನು ಸಾಕಿರೋ ಕೋಳಿ ಇದು. ಜತೆಗೇ ತೆಗೆದುಕೊಂಡು ಹೋಗುವೆ ಎಂದು ಹಣ ಕೊಟ್ಟು ಟಿಕೆಟ್​ ಪಡೆದರು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net