ರಾತ್ರೋರಾತ್ರಿ 700 ಅಡಿಕೆ ಮರಗಳನ್ನು ಕತ್ತರಿಸಿದ ದುಷ್ಕರ್ಮಿಗಳು: ಅಡಿಕೆ ಮರ ತಬ್ಬಿಕೊಂಡು ಕಣ್ಣೀರಿಟ್ಟ ರೈತ!

areca tree
Published on

ಹಾವೇರಿ: ಫಸಲು ಬಿಡುವ ಹಂತಕ್ಕೆ ಬೆಳೆದು ನಿಂತಿದ್ದ ಬರೋಬ್ಬರಿ 700 ಅಡಿಕೆ ಮರಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ಹಾನಗಲ್ ತಾಲೂಕಿನ ಬಾಳಂಬಿಡ ಗ್ರಾಮದಲ್ಲಿ ಸಂಭವಿಸಿದೆ.

ಒಂದೂವರೆ ಎಕರೆ ಜಾಗದಲ್ಲಿ ರೈತ ಕಲೀಲ್ ಅಹ್ಮದ್​ ವಾಲಿಕಾರ ಎಂಬುವರು ಬೆಳೆಸಿದ್ದ ಅಡಿಕೆ ತೋಟವನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಮನಬಂದಂತೆ ಕತ್ತರಿಸಿ ಹಾಕಿದ್ದಾರೆ. ಖಲೀಲ್ ಅಹಮ್ಮದ್ ವಾಲೀಕಾರ ಐದಾರು ವರ್ಷದಿಂದ ಕಷ್ಟಪಟ್ಟು ಅಡಿಕೆ ಮರಗಳನ್ನು ಬೆಳೆಸಿದ್ದರು. ಇನ್ನೊಂದು ವರ್ಷದ ಫಸಲು ಕೈಸೇರುವ ಮಟ್ಟಕೆ ಬೆಳೆದು ನಿಂತಿದ್ದ ಮರಗಳನ್ನು ರಾತ್ರೋರಾತ್ರಿ ಕತ್ತರಿಸಿ ಹಾಕಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಈ ಸುದ್ದಿ ಕೇಳಿ ತೋಟಕ್ಕೆ ಓಡೋಡಿ ಬಂದ ರೈತ, ಮುರಿದು ಬಿದ್ದ ಅಡಿಕೆ ಮರಗಳನ್ನ ತಬ್ಬಿಕೊಂಡು ಚೀರಾಡುತ್ತಿದ್ದ ದೃಶ್ಯ ಗ್ರಾಮಸ್ಥರ ಕಣ್ಣಲ್ಲೂ ನೀರು ತರಿಸಿತು.

ಸ್ಥಳಕ್ಕೆ ಬಂದ ಆಡೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ನೊಂದ ರೈತನಿಗೆ ಸಮಾಧಾನ ಮಾಡಿದರು. ಕಲೀಲ್ ಅಹ್ಮದ್​ಗೆ ಸಹೋದರ ಸೇರಿದಂತೆ ಗ್ರಾಮಸ್ಥರೂ ಭಾವುಕರಾಗಿಯೇ ಸಮಾಧಾನ ಹೇಳುತ್ತಿದ್ದರು. ಆದರೂ ಆ ರೈತನ ಗೋಳಾಟ ನಿಲ್ಲಲೇ ಇಲ್ಲ. 'ಅಯ್ಯೋ ನಾನು ಮನೆ ಮಕ್ಕಳಂತೆ ಬೆಳೆಸಿದ್ದ ಮರಗಳನ್ನು ಕೊಂದು ಬಿಟ್ರಲ್ಲೋ... ಹೊಟ್ಟೆಗೆ ಬೆಂಕಿ ಇಟ್ಟು ಅದೆಲ್ಲಿ ಅಡಗಿದ್ದೀರೋ... ಅಯ್ಯೋ ದೇವ್ರೇ, ಇದೆಂಥಾ ಅನ್ಯಾಯ ಮಾಡಿಬಿಟ್ಟೆ...' ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುತ್ತಿತ್ತು. (ದಿಗ್ವಿಜಯ ನ್ಯೂಸ್​, ಹಾವೇರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net