ತಾಯಿಯ ನರಳಾಟಕ್ಕೆ ನೊಂದ ಮಗ ಕೋವಿಡ್​ ವಾರ್ಡ್​ನಲ್ಲೇ ಆತ್ಮಹತ್ಯೆ!

Suicide
Published on

ಹಾಸನ: ಮಹಾಮಾರಿ ಕರೊನಾ ತಂದೊಡ್ಡುತ್ತಿರುವ ಸಾವು-ನೋವಿನ ಪ್ರಮಾಣ ಅಷ್ಟಿಷ್ಟಲ್ಲ. ಕೋವಿಡ್​ ಸಂಕಷ್ಟಕ್ಕೆ ಸಿಲುಕಿ ಹಲವರ ಬದುಕು ಮೂರಾಬಟ್ಟೆಯಾಗಿದೆ. ಕೆಲವರು ಸೋಂಕಿಗೆ ಹೆದರಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇಲ್ಲೊಬ್ಬ ಯುವಕ ಕರೊನಾ ಸೋಂಕಿತ ತಾಯಿಯ ನರಳಾಟ ನೋಡಲಾಗದೆ ಆಸ್ಪತ್ರೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಇಂತಹ ಅಮಾನವೀಯ ಘಟನೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದೆ. ಕೊಡುಗು ಜಿಲ್ಲೆ ಮಾದರೆ ಗ್ರಾಮದ ಶರತ್ ಕುಮಾರ್(31) ಮೃತ ದುರ್ದೈವಿ. ಕಳೆದ ಹತ್ತು ದಿನಗಳ ಹಿಂದೆ ಶರತ್ ತಾಯಿಗೆ ಕರೊನಾ ಸೋಂಕು ತಗುಲಿತ್ತು. ಹಾಸನ ಕೋವಿಡ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶರತ್​ ಮತ್ತು ಈತನ ಸಹೋದರ ಇಬ್ಬರೂ ತಾಯಿಯ ಆರೈಕೆ ಮಾಡುತ್ತಿದ್ದರು.

ನಿನ್ನೆ ಊರಿಗೆ ಹೋಗುತ್ತೇನೆಂದು ಸಹೋದರನ ಬಳಿ ಹೇಳಿ ಹೊರಟಿದ್ದ ಶರತ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ತಾಯಿ ಸ್ಥಿತಿ ಕಂಡು ಮನನೊಂದಿದ್ದ ಶರತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇಂದು ಬೆಳಗ್ಗೆ ಆಸ್ಪತ್ರೆ ಸಿಬ್ಬಂದಿ ಸ್ವಚ್ಛತೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶರತ್​ ಶವ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net