ಮತಪಟ್ಟಿಯಲ್ಲಿ ದೋಷ ಹುಡುಕಾಟಕ್ಕಿಳಿದ ಕೈ

KPCC (1)
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಮತಗಳ್ಳತನ ಆರೋಪ ಮಾಡಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಸಾಕ್ಷ್ಯ ಸಂಗ್ರಹ ಮತ್ತು ಮತಪಟ್ಟಿಯಲ್ಲಿನ ದೋಷ ಪತ್ತೆಗೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳ್ಳ ಮತದಾನವಾಗಿದೆ ಎಂದು ರಾಹುಲ್ ಗಾಂಧಿ ಮಾಡಿದ್ದ ಮತಗಳ್ಳತನ ಆರೋಪವನ್ನೇ ಮುಂದಿಟ್ಟುಕೊಂಡು ದೇಶವ್ಯಾಪಿ ‘ವೋಟ್ ಅಧಿಕಾರ್ ರ‌್ಯಾಲಿ’ ಮತ್ತು ಸಮಾವೇಶಗಳನ್ನು ಕೈ ನಾಯಕರು ನಡೆಸುತ್ತಿದ್ದಾರೆ. ಇದರ ಭಾಗವಾಗಿ ರಾಜ್ಯ ಕಾಂಗ್ರೆಸ್ ಘಟಕ ಒಂದು ಹೆಜ್ಜೆ ಮುಂದಿಟ್ಟು, ಮತದಾರರ ಪಟ್ಟಿ ಹಿಡಿದು ಮನೆಮನೆಗೆ ಭೇಟಿ ನೀಡುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಅಧ್ಯಕ್ಷರಿಗೆ ಮತ್ತು ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಯೂತ್ ಕಾಂಗ್ರೆಸ್ ಘಟಕ, ಎನ್‌ಎಸ್‌ಯುಐ ಮತ್ತು ಮಹಿಳಾ ಘಟಕ ಸದಸ್ಯರು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಪರಿಶೀಲಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಕಾರ್ಯಾರಂಭವಾಗಿದ್ದು, ಸೆಪ್ಟೆಂಬರ್ 28ಕ್ಕೆ ಆಯಾ ಬ್ಲಾಕ್ ಅಧ್ಯಕ್ಷರಿಗೆ ವರದಿ ವಹಿಸಲಿದ್ದಾರೆ. ಅಲ್ಲಿಂದ ರಾಜ್ಯಾಧ್ಯಕ್ಷರಿಗೆ ತಲುಪಲಿದ್ದು, ಅದರ ಮೇಲೆ ಮುಂದಿನ ಕ್ರಮದ ಬಗ್ಗೆ ನಿರ್ಣಯವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮತಪಟ್ಟಿಯಲ್ಲಿರುವ ವ್ಯಕ್ತಿ ಅದೇ ವಿಳಾಸದಲ್ಲಿ ಇದ್ದಾರಾ? ಇದ್ದರೆ ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಾರಾ? ಮತ್ತು ಮತದಾನ ಮಾಡುವಾಗ ಸಮಸ್ಯೆ ಆಗಿತ್ತೇ? ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಇದಲ್ಲದೆ, ಮತದಾರರ ಪಟ್ಟಿಯಲ್ಲಿರುವ ವಿಳಾಸದಲ್ಲಿ ಅದೇ ಮತದಾರ ಇದ್ದಾರಾ? ವಿಳಾಸ ಬದಲಾಯಿಸಿ ಹೋಗಿದ್ದಾರಾ? ಹೋಗಿದ್ದರೆ ಆ ವಿಳಾಸದಲ್ಲಿಯೂ ಮತದಾರರ ಪಟ್ಟಿಗೆ ಸೇರ್ಪಡೆ ಆಗಿದ್ದಾರಾ? ಎಂಬುದನ್ನು ಗುರುತಿಸುತ್ತಿದ್ದಾರೆ.

ಬೆಂಗಳೂರು, ಧಾರವಾಡ, ಬಾಗೇಪಲ್ಲಿ, ಬಳ್ಳಾರಿ ನಗರ, ಚಾಮರಾಜನಗರ, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಸರ್ವೇ ನಡೆಯುತ್ತಿದೆ.

ನಗರದಲ್ಲೇ ಲೋಪ ಪತ್ತೆ:

ಕಳೆದ ಎರಡು ದಿನಗಳಲ್ಲಿ ಸರ್ವೇ ನಡೆಸಿದಾಗ ಗ್ರಾಮೀಣ ಮತದಾರರ ಪಟ್ಟಿಯಲ್ಲಿ ಲೋಪಗಳು ಕಂಡು ಬರುತ್ತಿಲ್ಲ. ಆದರೆ, ನಗರದಲ್ಲಿ ಸಾಕಷ್ಟು ದೋಷಗಳು ಪತ್ತೆಯಾಗುತ್ತಿವೆ. ಒಂದೇ ಮನೆಯಲ್ಲಿರುವ ನಾಲ್ಕೈದು ಮಂದಿಯ ಕುಟುಂಬದಲ್ಲಿ ಇಬ್ಬರನ್ನು ಒಂದು ಬೂತ್‌ನಲ್ಲಿ, ಇನ್ನುಳಿದವರನ್ನು ಮತ್ತೊಂದು ಬೂತ್‌ನಲ್ಲಿ ಬರುವಂತೆ ಮತಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಓಟ್ ಮಾಡುವಾಗ ಬೂತ್ ಪತ್ತೆಹಚ್ಚಲು ಸಾಧ್ಯವಾಗದೆ ಸಾಕಷ್ಟು ಮಂದಿ ಮತದಾನವನ್ನೇ ಮಾಡುತ್ತಿಲ್ಲ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ತಿಳಿಸಿದ್ದಾರೆ.

ಇದಲ್ಲದೆ, ಆರಂಭದಲ್ಲಿ ಮೂರ‌್ನಾಲ್ಕು ಬಾರಿ ಮತದಾನ ಮಾಡಿದಾಗ ಮತಪಟ್ಟಿಯಲ್ಲಿ ಹೆಸರು ಸರಿಯಾಗಿಯೇ ಉಲ್ಲೇಖವಾಗಿರುತ್ತದೆ. ಏಕಾಏಕಿ ಮತದಾರನಿಗೆ ತಿಳಿಯದಂತೆ ಆತನ ಹೆಸರಿನಲ್ಲಿ ದೋಷ ಅಥವಾ ತಂದೆ-ತಾಯಿ ಹೆಸರು ಬದಲಾಯಿಸಿರುವುದು ಪತ್ತೆಯಾಗಿದೆ. ಇದರಿಂದ ಮತದಾನದ ದಿನ ಆತ ಮತ ಚಲಾವಣೆಗೆ ಹೋದಾಗ ತನ್ನ ಬಳಿ ಇರುವ ಐಡಿ ಕಾರ್ಡ್‌ಗೆ ಹೋಲಿಕೆಯಾಗದೆ ಹಿಂದಿರುಗಿರುತ್ತಾರೆ ಎಂದು ಎಚ್.ಎಸ್.ಮಂಜುನಾಥ್ ಆರೋಪಿಸಿದ್ದಾರೆ.

ಲಿಸ್ಟ್‌ನಲ್ಲಿ ಲೋಪ ಶೋಧ

-ಮತದಾರ ಅದೇ ವಿಳಾಸದಲ್ಲಿ ಇದ್ದಾರಾ?

-ಒಬ್ಬನ ಹೆಸರು ಬೇರೆ ಬೇರೆ ಕಡೆ ಸೇರಿದೆಯೇ?

-ಮತಪಟ್ಟಿಯಲ್ಲಿರುವ ವ್ಯಕ್ತಿ ಅದೇ ವಿಳಾಸದಲ್ಲಿ ಇದ್ದಾರಾ?

-ಸ್ಥಳಾಂತರವಾಗಿದ್ದರೆ ಹೆಸರು ಏಕೆ ಬದಲಾಯಿಸಿಲ್ಲ?

-ಅಸಲಿ ಮತದಾರನಿಗೆ ಮತದಾನದ ವೇಳೆ ಆಗುತ್ತಿರುವ ಅಡೆತಡೆ

-ನಕಲಿ ವಿಳಾಸ ಕೊಟ್ಟ ಮತದಾರರ ಪಟ್ಟಿ ಸೇರಿದ್ದಾರಾ?

ಮತದಾರರ ಪಟ್ಟಿಯಲ್ಲಿರುವ ದೋಷಗಳ ಪತ್ತೆ ಮತ್ತು ನಕಲಿ ಮತದಾರರನ್ನು ಹುಡುಕಾಟ, ನೈಜ ಮತದಾರನಿಗೆ ವೋಟಿಂಗ್ ವೇಳೆ ಆಗುತ್ತಿರುವ ಸಮಸ್ಯೆಗಳನ್ನು ಅಧ್ಯಯನ ನಡೆಸಲಾಗುತ್ತಿದೆ.

ಎಚ್.ಎಸ್.ಮಂಜುನಾಥ್, ಅಧ್ಯಕ್ಷ ರಾಜ್ಯ ಯುವ ಕಾಂಗ್ರೆಸ್ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net