ದೆಹಲಿಗೆ ತೆರಳಿದ ಬಿಜೆಪಿ ಭಿನ್ನರ ತಂಡ

7-67a10764ddd5f
Published on

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಹಾಗೂ ಆ ಸ್ಥಾನಕ್ಕೆ ಚುನಾವಣೆ ನಡೆಸಲು ಪಟ್ಟು ಹಿಡಿದಿರುವ ಭಿನ್ನಮತೀಯರ ಒಂದು ತಂಡ ಸೋಮವಾರ ದೆಹಲಿಗೆ ತೆರಳಿದೆ.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಶ್ರೀಮಂತ ಪಾಟೀಲ, ಮುಖಂಡ ಎನ್.ಆರ್. ಸಂತೋಷ್ ದೆಹಲಿ ತಲುಪಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಬಿ.ಪಿ.ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಸಿದ್ದೇಶ್ವರ ಮತ್ತಿತರರು ಮಂಗಳವಾರ ದೆಹಲಿ ತಲುಪಲಿದ್ದಾರೆ. ವರಿಷ್ಠರಿಗೆ ದೂರು ಸಲ್ಲಿಸಲು ನಿರ್ಧರಿಸಿರುವ ಭಿನ್ನರು ಇನ್ನೂ ಮೂರು ದಿನ ದೆಹಲಿಯಲ್ಲಿ ಬಿಡಾರ ಹೂಡುವ ಸಾಧ್ಯತೆಗಳಿವೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ‘ಸಂಘ’ದ ಪ್ರಮುಖರೊಬ್ಬರು ಭೇಟಿಗೆ ಕಾಲಾವಕಾಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ಡಾ.ಕೆ.ಸುಧಾಕರ್ ಈಗಾಗಲೇ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net