

ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಯ ಪ್ರಮುಖ ಕೇಂದ್ರದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಶುಕ್ರವಾರ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಹೋಬಳಿ ವ್ಯಾಪ್ತಿಯ ಹರವೆ, ಗಾವಡಗೆರೆ, ಬಿಳಿಗೆರೆ, ಜಾಬಗೆರೆ, ಮುಳ್ಳೂರು, ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ವಿವಿಧ ಶಾಲಾ ಮಕ್ಕಳು ರಾಷ್ಟ್ರಧ್ವಜ ಹಿಡಿದು ಜಾಥಾದಲ್ಲಿ ಪಾಲ್ಗೊಂಡರು. ಗ್ರಾಮಸ್ಥರು ಎತ್ತಿನ ಗಾಡಿಗಳನ್ನು ಸಿಂಗರಿಸಿ ರಾಸುಗಳನ್ನು ವಿಶೇಷವಾಗಿ ಅಲಂಕರಿಸಿ ರಥದ ಜತೆ ಮೆರವಣಿಗೆಯಲ್ಲಿ ಸಾಗಿಬಂದವು.
ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸ್ವಾಗತಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗ್ರಾಮಗಳ ಬೀದಿ ಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ, ತಳಿರು ತೋರಣ, ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು. ಟಮಟೆ ವಾದ್ಯಗಳು ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯನ್ನು ಇನ್ನಷ್ಟು ಅಂದಗಾಣಿಸಿದವು.
ಹಿರೀಕ್ಯಾತನಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೌಢಶಾಲಾ ಮುಖ್ಯಶಿಕ್ಷಕಿ ಸರಳಾ, ಸಂವಿಧಾನವೆಂಬುದು ಕೇವಲ ಕಾನೂನಿನ ಪುಸ್ತಕವಲ್ಲ್ಲ. ಅದು ಆಧುನಿಕ ಭಾರತದಲ್ಲಿ ಜನರ ಜೀವನವನ್ನು ಪುನರುಜ್ಜೀವನಗೊಳಿಸಿದ ಒಂದು ಮಹಾನ್ ಗ್ರಂಥ ಎಂದರು.
ಹುಣಸೂರಿನ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕಾರ್ತಿಕ್ ಮಾತನಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಗ್ರಾಮದ ಯಜಮಾನರಾದ ಜಗದೀಶ್, ಸುರೇಶ್, ಶ್ರೀಧರ್, ಪಿಡಿಒ ಶಿಲ್ಪಾಶ್ರೀ, ಜನಪ್ರತಿನಿಧಿಗಳು ಹಾಜರಿದ್ದರು.