ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಎಜುಕೇಶನ್ ಎಕ್ಸಪೋಗೆ ಅದ್ದೂರಿ ಚಾಲನೆ

pixlr_20250129115656383
Published on

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದೊಂದಿಗೆ ಕನ್ನಡದ ನಂ‌.1 ದಿನಪತ್ರಿಕೆ ವಿಜಯವಾಣಿಯಿಂದ ಆಯೋಜನೆಗೊಂಡ "ಎಜುಕೇಶನ್ ಎಕ್ಸಪೋ-2025" ಅದ್ದೂರಿಯಾಗಿ ಚಾಲನೆ ಪಡೆದುಕೊಂಡಿತು.

ಇಲ್ಲಿನ ಸದಾಶಿವ ನಗರದಲ್ಲಿರುವ ರಾಣಿಚೆನ್ನಮ್ಮ ಸಭಾಭವನದಲ್ಲಿ ಬುಧವಾರ ಉತ್ತರ ವಲಯದ ಐಜಿಪಿ ಚೇತನಕುಮಾರ ರಾಠೋಡ ಅವರು ಜ್ಯೋತಿ ಬೆಳಗಿಸಿ, ಪೂಜ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಚೇತನಕುಮಾರ ರಾಠೋಡ ಅವರು, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಎಜುಕೇಶನ್ ಎಕ್ಸಪೋ ದಾರಿದೀಪ ಎಂದರು.

ವಿದ್ಯಾರ್ಥಿಗಳು ಹಾಗೂ ಪಾಲಕರು ಎಜುಕೇಶನ್ ಎಕ್ಸಪೋದಲ್ಲಿ ಭಾಗವಹಿಸಿ ಆಯಾ ಶಿಕ್ಷಣ ಸಂಸ್ಥೆಗಳ ಮಾಹಿತಿ ಪಡೆದು ಉತ್ತಮ ಶಿಕ್ಷಣ ಸಂಸ್ಥೆಗಳ ಕುರಿತು ಮಾಹಿತಿ ಪಡೆಯಬೇಕೆಂದರು.

ಇತ್ತೀಚೆಗೆ ಕನ್ನಡ ಮಾಧ್ಯಮದ ಶಾಲೆಗಳ ಕಡಿಮೆಯಾಗುತ್ತಿವೆ. ಮಕ್ಕಳ ಸಂಖ್ಯೆಯೂ ಕುಸಿಯುತ್ತಿದೆ. ಪ್ರತಿಯೊಬ್ಬರೂ ಇಂಗ್ಲಿಷ್ ಮಾಧ್ಯಮ ಬಯಸುತ್ತಿದ್ದಾರೆ. ಮಧ್ಯಪ್ರದೇಶದಂಥ ಹಿಂದಿ ಮಾಧ್ಯಮದಿಂದ ಬಂದ ನನಗೂ ಕೂಡ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿತ್ತು. ಆದರೆ ಸತತ ಪರಿಶ್ರಮದಿಂದ ಓದಿದ ನಂತರವೇ ಭಾಷೆಯ ಕಲಿಕೆ ಸುಲಭವಾಯಿತು. ಇಂದು ಕನ್ನಡ ಕೂಡ ಅತ್ಯಂತ ಸುಲಭವಾಗಿ ಕಲಿತು ಮಾತನಾಡುತ್ತಿರುವುದಕ್ಕೆ ಆ ಪ್ರಯತ್ನ, ಶ್ರದ್ಧೆಯೇ ಕಾರಣ ಎಂದರು.

ಭಾಷೆ ಒಂದು ಮಾಧ್ಯಮ ಅಷ್ಟೆ. ಅದಕ್ಕಾಗಿ ಹೆದರಿಕೆ ಅವಶ್ಯಕತೆ ಇಲ್ಲ. ಹಿಂಜರಿಕೆ ಇಲ್ಲದೇ ಹೊಸ ಭಾಷೆ ಕಲಿತು ಅಂದುಕೊಂಡ ಗುರಿ ಸಾಧಿಸುವ ನಿಟ್ಟಿನಲ್ಲಿ ಮುನ್ನುಗ್ಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ವಿಚಾರ ವಿನಿಮಯವೇ ಮೇಳಗಳ ಪ್ರಮುಖ ಉದ್ದೇಶ. ಈಗಾಗಲೇ ಜಿಲ್ಲೆಯಲ್ಲಿ ಹಲವು ಮೇಳಗಳು ನಡೆದಿವೆ. ಕೃಷಿ ಮೇಳ, ಫಲ ಪುಷ್ಪ ಮೇಳ, ಸಾಬೂನು ಮೇಳ ಹೀಗೆ ಅನೇಕ ಮೇಳಗಳ ಬಳಿಕ ಇದೀಗ ಶಿಕ್ಷಣ ಮೇಳ ನಡೆದಿದ್ದು ಈ ಭಾಗದ ಹಿರಿಮೆ ಎಂದರು.

ಸರ್ಕಾರಿ ಶಾಲೆಯಲ್ಲಿ ಕಲಿತು, ಕನ್ನಡ ಮಾಧ್ಯಮದಲ್ಲಿ ಓದಿ ಐಪಿಎಸ್ ಪಾಸ್ ಮಾಡಿದ ನನ್ನಂಥವರಿಗೆ ಇಂಥ ಮೇಳಗಳು ಹೊಸದು. ಆ ಸಮಯದಲ್ಲಿ ಮಾರ್ಗದರ್ಶನದ ಕೊರತೆ ಹೆಚ್ಚು ಕಾಡುತ್ತಿತ್ತು. ಎಸ್ ಎಸ್ ಎಲ್ ಸಿ ಬಳಿಕ ಏನು ಮಾಡುವುದು ಎಂಬುದೇ ನಮಗೆಲ್ಲ ಗೊತ್ತಿರಲಿಲ್ಲ. ಏನೆಲ್ಲ ಅವಕಾಶಗಳಿವೆ, ಹೇಗೆಲ್ಲಾ ವಿಷಯಗಳ ಆಯ್ಕೆ ಮಾಡಿಕೊಳ್ಳಬೇಕೆಂಬ ಮಾಹಿತಿಯೇ ಆಗ ಇರಲಿಲ್ಲ. ಇದೀಗ ಆ ಕೊರತೆಯನ್ನು ಈ ಶೈಕ್ಷಣಿಕ ಮೇಳಗಳು ನೀಗಿಸುತ್ತಿವೆ ಎಂದರು.

ಬ್ಯಾಂಕಿಂಗ್ ಬಗ್ಗೆ, ಸಾಲಗಳ ಬಗ್ಗೆ, ವಿಜ್ಞಾನದ ಆವಿಷ್ಕಾರಗಳು, ಶೈಕ್ಷಣಿಕ ಸೌಲಭ್ಯಗಳು....ಹೀಗೆ ಅನೇಕ ಮಾಹಿತಿಯನ್ನು ಶೈಕ್ಷಣಿಕ ಮೇಳಗಳಿಂದ ತಿಳಿದುಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದಿಂದ ಬಂದ ಅನೇಕ ಮಕ್ಕಳಿಗೆ ವಿಜ್ಞಾನ, ಇಂಗ್ಲಿಷ್ ಸಮಸ್ಯೆಯಾಗುವುದು ಸಹಜ. ನನಗೂ ಕೂಡ ಈ ಅನುಭವ ಆಗಿದೆ.

ವಿಜ್ಞಾನದಲ್ಲಿ ನನಗೆ 'ಎಕಿನೋಡರ್ಮನೇಟ್' ಸಹ ಅನ್ನಲಿಕ್ಕೆ ಬರುತ್ತಿರಲಿಲ್ಲ. "ಅಕಿ ನೋಡೊ ಹಿರೇಮಠ" ಎನ್ನುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದ ಲಕ್ಷ್ಮಣ ‌ಇಂಬರಗಿ ಅವರು, ಸತತ ಪ್ರಯತ್ನ, ಶ್ರದ್ದೆ, ಪ್ರಾಮಾಣಿಕತೆಯಿಂದ ಓದಬೇಕು. ಮತ್ತು ಇಂಥ ಮೇಳಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜಾಗೃತಿಗಾಗಿ

ಬಾಲ ವಿಕಾಸ ಅಕಾಡೆಮಿಯಿಂದ ಪೊಲೀಸ್ ಇಲಾಖೆಗೆ ಐದು ಲಕ್ಷ ರೂಪಾಯಿ ಅನುದಾನ ನೀಡುತ್ತಿರುವುದಾಗಿ ತಿಳಿಸಿದರು.

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ,

ಬಸವರಾಜ ಕವಲಗಿ ಮಾತನಾಡಿ, ಇಂದಿನ ಮಕ್ಕಳು ಹಾಗೂ ಪಾಲಕರು ಅತ್ಯಂತ ಅದೃಷ್ಠವಂತರು. ಕಾರಣ ಇಂದು ಶಿಕ್ಷಣದ ಕುರಿತು ಮಾರ್ಗದರ್ಶನ ಪಡೆಯಲು ಸಾಕಷ್ಟು ಅವಕಾಶಗಳಿವೆ. ಶಿಕ್ಷಣ ಮೇಳಗಳು ಮಾರ್ಗದರ್ಶನ ನೀಡುವ ಪ್ರಮುಖ ವೇದಿಕೆಗಳಾಗಿವೆ ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾಗುತ್ತಿದೆ. ಹಿಂದಿನ ಕಾಲದಲ್ಲಿ ಶಿಕ್ಷಣಕ್ಕಾಗಿ ಗುರು ಹಾಗೂ ಗುರುಕುಲ ಅರಸಿಕೊಂಡು ಕಾಶಿಗೋ....ಕಾಡು- ಗುಹೆಗೋ ಹೋಗಬೇಕಿತ್ತು. ಆದರೆ ಇಂದು ಶಿಕ್ಷಣ ಸಂಸ್ಥೆಗಳೇ ಇಂದು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬರುವಂತಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿಜಯವಾಣಿ ಶಿಕ್ಷಣ ಮೇಳ ಆಯೋಜಿಸುತ್ತಿದ್ದು ಈ ಭಾಗದ ಮಕ್ಕಳು ಹಾಗೂ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಎಸ್ ಎಸ್ ಎಲ್ ಸಿ ಬಳಿಕ ಇರುವ ಕೋರ್ಸ್ ಗಳೇನು? ಪಿಯುಸಿ ನಂತರ ಮುಂದೇನು? ಯಾವ ಕೋರ್ಸ್ ಸೂಕ್ತ? ಯಾವ ಶಿಕ್ಷಣ ಸಂಸ್ಥೆಗಳು ಸೂಕ್ತ ಎಂಬುದನ್ನು ಅರಿತುಕೊಳ್ಳಲು ಶಿಕ್ಷಣ ಮೇಳ ಸಹಕಾರಿಯಾಗಿದೆ ಎಂದರು.

ಆರ್ ಕೆಎಂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶಂಭುಲಿಂಗ ಕರ್ಪೂರಮಠ ಮಾತನಾಡಿ, ವಿದ್ಯಾರ್ಥಿಗಳ

ಉತ್ತಮ ಭವಿಷ್ಯಕ್ಕೆ ಶಿಕ್ಷಣ ಮೇಳ ದಾರಿದೀಪ ಎಂದರು.

ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಾಲ್ಕನೇ ಶೈಕ್ಷಣಿಕ ಮೇಳೆ ಅದ್ದೂರಿಯಾಗಿ ಚಾಲನೆ ಪಡೆದುಕೊಳ್ಳಲು ಈ ಭಾಗದ ಓದುಗರು, ಶಿಕ್ಷಣ ಸಂಸ್ಥೆಗಳು ಹಾಗೂ ಅನೇಕ ಸಂಘ- ಸಂಸ್ಥೆಗಳ ನೆರವು ಮತ್ತು ಸಹಕಾರವೇ ಕಾರಣ ಎಂದರು.

ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹಾಗೂ ಡಿಡಿಪಿಯು ಚಂದ್ರಶೇಖರ ಹೊಸಮನಿ ಮತ್ತು ವಿ.ಎಸ್. ಬಗಲಿ ಹಾಗೂ ಶ್ರೀಯುತ ಸಜ್ಜನ ಮಾತನಾಡಿ, ಶಿಕ್ಷಣ ಮೇಳದ ಉಪಯುಕ್ತತೆ ಕುರಿತು ಹೃದಯ ತುಂಬಿ

ಪಾಂಡುರಂಗ ಕುಲಕರ್ಣಿ ಪ್ರಾರ್ಥಿಸಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net