

ಮೈಸೂರು: ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 15ರಂದು ಹರಿಯಾಣದ ಜಿಂದ್‌ನಲ್ಲಿ 2 ಲಕ್ಷ ರೈತರ ಮಹಾ ಸಮಾವೇಶ ಆಯೋಜಿಸಲಾಗಿದೆ ಎಂದು ರೈತಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದರು.
ಜತೆಗೆ ಸೆ.22ರಂದು ಕುರುಕ್ಷೇತ್ರದಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.
ಕಳೆದ 200 ದಿನಗಳಿಂದ ದೆಹಲಿಯ ಬಾರ್ಡರ್ ಹಾಗೂ ಕನೋರಿ ಬಾರ್ಡರ್ ಸುತ್ತ ಗಡಿಗಳಲ್ಲಿ ನಿರಂತರ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು, ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ, ರೈತರ ಸಂಪೂರ್ಣ ಸಾಲಮನ್ನಾ ಸಮಸ್ಯೆ ಬಗೆಹರಿಸಲಿ ಎಂದು ಒತ್ತಾಯಿಸಿದ ಅವರು, ಸರ್ವೋಚ್ಚ ನ್ಯಾಯಾಲಯ ರೈತರ ಸಮಸ್ಯೆ ಬಗೆಹರಿಸುವಂತೆ ಪರಿಹಾರಕ್ಕೆ ಮಧ್ಯವರ್ತಿಗಳ ಸಮಿತಿ ರಚಿಸುವಂತೆ ಸೂಚನೆ ನೀಡಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.