

ಶಿವಮೊಗ್ಗ: ಯುವ ಜನರಲ್ಲಿ ಬಹಳಷ್ಟು ಪ್ರತಿಭಾವಂತರಿದ್ದು, ಅವರಲ್ಲಿರುವ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಗಳು ಅವಶ್ಯ ಎಂದು ನಟಿ ನಿಧಿ ಸುಬ್ಬಯ್ಯ ಅಭಿಪ್ರಾಯಪಟ್ಟರು.
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಿಂದ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉತ್ಥಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಥಾನ ಒಳ್ಳೆಯ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅಗತ್ಯ. ಸಮಯ ಪಾಲಿಸಿದಾಗ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದರು.
30 ಪದವಿ ಕಾಲೇಜುಗಳ 850ಕ್ಕೂ ಅಧಿಕ ವಿದ್ಯಾರ್ಥಿಗಳು, ಸಮೂಹ ನೃತ್ಯ, ರಸಪ್ರಶ್ನೆ, ಸಮೂಹ ಗಾಯನ, ಫೇಸ್ ಪೈಂಟಿಂಗ್, ವಾಲಿಬಾಲ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಶೇಖರ್, ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಖಜಾಂಚಿ ಡಿ.ಜೆ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಶಿವಕುಮಾರ್, ಪ್ರಾಚಾರ್ಯ ಡಾ. ವೈ.ಜಯಕುಮಾರ್, ಎಂಬಿಎ ವಿಭಾಗದ ನಿರ್ದೇಶಕ ಡಾ. ಸಿ.ಶ್ರೀಕಾಂತ ಉಪಸ್ಥಿತರಿದ್ದರು.