ಒಳ್ಳೆಯ ವ್ಯಕ್ತಿತ್ವವೇ ನಿಜವಾದ ಆಸ್ತಿ

nagarapanchami
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ನಾಗರಪಂಚಮಿ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳು ನಾಗರಕಟ್ಟೆಗೆ ಹಾಲೆರೆದು ಪೂಜಿಸಿದರು.
Published on

ಬಾಳೆಹೊನ್ನೂರು: ಧರ್ಮದಿಂದ ನಡೆದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಹಣ ನೋಡಿ ಕೊಡುವ ಬೆಲೆ, ಆಸ್ತಿ ನೋಡಿ ಒಂದಾಗುವ ಬಂಧುಗಳು ಹೆಚ್ಚು ಕಾಲ ನಮ್ಮೊಂದಿಗೆ ಉಳಿಯುವುದಿಲ್ಲ. ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ರಂಭಾಪುರಿ ಪೀಠದಲ್ಲಿ ನಾಗರ ಪಂಚಮಿ ಅಂಗವಾಗಿ ಸೋಮವಾರ ನಾಗರಕಟ್ಟೆಗೆ ಹಾಲೆರೆದು ಆಶೀರ್ವಚನ ನೀಡಿದರು.
ಸಂಪ್ರದಾಯ, ಪರಂಪರೆಗಳು ಮಾನವನ ಶ್ರೇಯಸ್ಸಿಗಾಗಿ ಇವೆಯೇ ಹೊರತು ಅವನತಿಗಲ್ಲ. ಪ್ರಾಚೀನ ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಂಡು ಬಾಳಿದರೆ ಜೀವನದಲ್ಲಿ ಶಾಂತಿ ನೆಲೆಸಲು ಸಾಧ್ಯ. ಭಗವಂತನ ಕೈಯಲ್ಲಿ ಎಲ್ಲ ಇರುತ್ತದೆ. ಆದರೂ ಸುಮ್ಮನಿರುತ್ತಾನೆ. ಮನುಷ್ಯನ ಕೈಯಲ್ಲಿ ಏನೂ ಇಲ್ಲ. ಆದರೂ ಎಲ್ಲವೂ ಇದೆ ಎನ್ನುವ ಭ್ರಮೆಯಲ್ಲಿರುತ್ತಾನೆ ಎಂದರು.
ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ತಿಂದ ಅನ್ನ ಶಾಶ್ವತವಾಗಿ ಯಾರ ಹೊಟ್ಟೆಯಲ್ಲೂ ಇರುವುದಿಲ್ಲ. ಆದರೆ ಹಸಿವು ನೀಗಿಸಿದ ಆ ಘಳಿಗೆಯನ್ನು ಅರಿತವರು ಎಂದೂ ಮರೆಯಲಾರರು. ಹಿಂದೆ ಜನರ ಬಟ್ಟೆ ಕೊಳೆಯಾಗಿರುತ್ತಿದ್ದರೂ ಮನಸ್ಸು ಸ್ವಚ್ಛವಾಗಿತ್ತು. ಆದರೆ ಈಗ ಬಟ್ಟೆಗಳು ಸ್ವಚ್ಛವಾಗಿವೆ. ಆದರೆ ಮನಸ್ಸು ಕೊಳೆಯಾಗಿದೆ ಎಂದರು.
ಆತ್ಮಸಾಕ್ಷಿಗೆ ಅನುಗುಣವಾಗಿ ನಾವಿದ್ದರೆ ಯಾರ ಮುಂದೆಯೂ ತಲೆ ತಗ್ಗಿಸುವ ಅವಶ್ಯ ಇರುವುದಿಲ್ಲ ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ತಿಳಿಸಿದ್ದಾರೆ ಎಂದು ಹೇಳಿದರು.
ರಾಯಚೂರು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಒಳ್ಳೆಯದನ್ನು ಕೇಳಿ ಅದೇ ದಾರಿಯಲ್ಲಿ ಮುನ್ನಡೆಯುವ ಪ್ರಯತ್ನ ಮಾಡಬೇಕು ಎಂದರು.
ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಮತ್ತು ಸ್ವಾಗತ ಗೀತೆ ನಡೆಯಿತು. ಶಿಕ್ಷಕ ವೀರೇಶ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net