ಉತ್ತಮ ಪರಿಸರ ಆರೋಗ್ಯಕ್ಕೆ ಪೂರಕ

sgr parisara
ಸಾಗರದ ವಿಜಯನಗರ ಉದ್ಯಾನದಲ್ಲಿ ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ನಟರಾಜ್ ಗಿಡ ನೆಟ್ಟು ನೀರುಣಿಸಿದರು. ಶ್ರೀಶೈಲ ಭೀಮಸೇನ ಬಾಗಡಿ, ಎಚ್.ಕೆ.ನಾಗಪ್ಪ, ದಿನೇಶ್‌ಕುಮಾರ್ ಇತರರಿದ್ದರು.
Published on

ಸಾಗರ: ಪರಿಸರ ಉತ್ತಮವಾಗಿದ್ದರೆ ಮನುಷ್ಯನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುವ ದುರಾಲೋಚನೆಯನ್ನು ಬಿಡಬೇಕು ಎಂದು ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ನಟರಾಜ್ ಹೇಳಿದರು.

ಸಾಗರದ ವಿಜಯನಗರ ಉದ್ಯಾನದಲ್ಲಿ ಬುಧವಾರ ನಗರಸಭೆ, ನೇತಾಜಿ ಸುಭಾಶ್ಚಂದ್ರ ಬೋಸ್ ಯುವ ಟ್ರಸ್ಟ್, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಯೋಧ ನಮನ ಬಳಗದಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ಜಿಲ್ಲೆಯಲ್ಲಿ ಈ ಹಿಂದೆ ಅಪಾರ ಪ್ರಮಾಣದ ಕಾಡು ಇತ್ತು. ಒತ್ತುವರಿಯಾಗಿದ್ದನ್ನು ಹಂತಹಂತವಾಗಿ ಸ್ವಾಧೀನಪಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಒತ್ತುವರಿ ಮಾಡಿ ಭೂಮಿ ಜತೆ ಕಾಡನ್ನು ಸಹ ದೊಡ್ಡ ಪ್ರಮಾಣದಲ್ಲಿ ನಾಶ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪರಿಸರ ನಾಶ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದರೂ ಅದು ಫಲ ನೀಡುತ್ತಿಲ್ಲ ಎಂದರು.
ನ್ಯಾಯಾಧೀಶ ಶ್ರೀಶೈಲ ಭೀಮಸೇನ ಬಾಗಡಿ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಬೇರೆಬೇರೆ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಬಗರ್‌ಹುಕುಂ ಹೆಸರಿನಲ್ಲಿ ದೊಡ್ಡ ಪ್ರಮಾಣದ ಅರಣ್ಯ ನಾಶ ಮಾಡಲಾಗಿದೆ. ಒಂದು ಮರ ಕಡಿದರೆ ಹತ್ತು ಸಸಿ ನೆಡಬೇಕು ಎನ್ನುವ ಕಾನೂನು ಇದೆ. ಆದರೆ ಅದನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ, ಯೋಧ ನಮನ ಬಳಗದ ಅಧ್ಯಕ್ಷ ದಿನೇಶ್‌ಕುಮಾರ್, ವಕೀಲರ ಸಂಘದ ನಾಗರಾಜ್, ರಮೇಶ್, ನಗರಸಭೆ ಸದಸ್ಯರಾದ ವಿ.ಶಂಕರ್, ಎಲ್.ಚಂದ್ರಪ್ಪ, ಹಮೀದ್, ಅಧಿಕಾರಿಗಳಾದ ಮದನ್, ಶೈಲೇಶ್, ಚಂದ್ರಶೇಖರ್, ಕಿರಣ್‌ಕುಮಾರ್, ಸುಭಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net