ಬರದ ನಾಡಿನಲ್ಲಿ ಬಂಗಾರದ ಬೆಳೆ; ವಿದೇಶಿ ಹಣ್ಣಿನಿಂದ ಹಣದ ಹೊಳೆ

ವಿಜಯವಾಣಿ (5)
Published on

ಹಗಲು-ರಾತ್ರಿ, ಬಿಸಿಲು-ಮಳೆ, ಚಳಿ-ಗಾಳಿ, ನಿದ್ದೆ-ನೀರಡಿಕೆ ಯಾವುದನ್ನೂ ಲೆಕ್ಕಿಸದೇ ಸ್ವಂತ ಜೀವವನ್ನೇ ಸವೆಸಿ ಸಮಸ್ತ ನಾಡಿಗೆ ಅನ್ನ ನೀಡುವ ರೈತರು ಸದಾ ಸ್ಮರಣೀಯರು. ದೇಶದ ಐದನೇ ಪ್ರಧಾನಿ ಚೌಧರಿ ಚರಣ್​ಸಿಂಗ್ ಅವರ ಜನ್ಮದಿನವಾದ ಡಿ. 23ರಂದು ಪ್ರತಿ ವರ್ಷ ‘ರಾಷ್ಟ್ರೀಯ ರೈತ ದಿನ’ವನ್ನು ಆಚರಿಸಲಾಗುತ್ತದೆ.

ಕೃಷಿ ಉತ್ಪಾದನೆಯ ವಿಷಯದಲ್ಲಿ ಭಾರತ ಇಡೀ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ (ಮೊದಲನೆಯದು, ಚೀನಾ). 2020-21ರ ಭಾರತೀಯ ಆರ್ಥಿಕ ಸಮೀಕ್ಷೆ ಪ್ರಕಾರ, ನಮ್ಮ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ. 54.6ರಷ್ಟು ಮಂದಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿರತರು. ಕೈಗಾರಿಕೀಕರಣ, ನಗರೀಕರಣ, ಮೂಲಸೌಕರ್ಯ, ವಸತಿ ಮುಂತಾದ ಕೃಷಿಯೇತರ ಕಾರ್ಯಕ್ಕೆ ಭೂಮಿಯ ಬಳಕೆ ಹೆಚ್ಚುತ್ತಿರುವ ಕಾರಣ ಕೃಷಿ ಕ್ಷೇತ್ರದ ಮೇಲೆ ಒತ್ತಡ ಜಾಸ್ತಿಯಾಗಿದೆ. ಆದರೂ ನಮ್ಮ ರೈತರು ಸದಾ ಪ್ರಯೋಗಶೀಲರು. ಸಾಂಪ್ರದಾಯಿಕ ಬೆಳೆಗಳ ಜತೆಗೆ ಅಥವಾ ಅವುಗಳ ಹೊರತಾಗಿ ಅಪರೂಪದ, ವಾಣಿಜ್ಯ ಬೆಳೆಗಳನ್ನೂ ಯಶಸ್ವಿಯಾಗಿ ಬೆಳೆದು ಗಮನ ಸೆಳೆಯುತ್ತಿರುತ್ತಾರೆ. ಕರ್ನಾಟಕದಲ್ಲೂ ಅಂತಹ ಹಲವಾರು ಕೃಷಿಕರಿದ್ದಾರೆ. ಆ ಪೈಕಿ ಕೆಲವರ ಪರಿಚಯ ಇಲ್ಲಿದೆ.

ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷ ಲಕ್ಷ ಸಂಪಾದಿಸುವ ಸಹೋದರರು

| ಆರ್. ತುಳಸಿಕುಮಾರ್

ಬರದ ನಾಡು ಎಂಬ ಹಣೆಪಟ್ಟಿ ಇದ್ದರೂ, ಕೋಲಾರ ಜಿಲ್ಲೆಯು ‘ಸಿಲ್ಕ್-ಮಿಲ್ಕ್’ (ರೇಷ್ಮೆ ಹಾಗೂ ಹಾಲು) ಉತ್ಪನ್ನವನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿರುವುದರಿಂದ ಕೃಷಿ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹಣ್ಣು-ತರಕಾರಿ ಬೆಳೆಯುವಲ್ಲಿಯೂ ಪರಿಣತಿ ಹೊಂದಿರುವ ಇಲ್ಲಿನ ರೈತರು ಈಗ ವಿದೇಶಿ ಬೆಳೆ ‘ಡ್ರ್ಯಾಗನ್ ಫ್ರೂಟ್’ ಕೃಷಿ ಕೈಗೊಂಡು ಚಿನ್ನದ ಬೆಳೆಯನ್ನಾಗಿ ಮಾರ್ಪಡಿಸುತ್ತಿದ್ದಾರೆ. ಈ ಸಾಲಿಗೆ ಸೇರಿರುವ ಕೋಲಾರ ಜಿಲ್ಲೆಯ ಕೋರಂಡನಹಳ್ಳಿಯವರಾದ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಪದವೀಧರರಾದ ಹಿರಿಯ ಐಪಿಎಸ್ ಅಧಿಕಾರಿ, ಸದ್ಯ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಡಿ.ದೇವರಾಜ್ ಅವರು, ತಮ್ಮ ಸಹೋದರರಾದ ಕೃಷ್ಣಮೂರ್ತಿ ಹಾಗೂ ಮುನಿರಾಜುಗೆ ವಿದೇಶಿ ಬೆಳೆಯನ್ನು ದೇಶೀ ವಿಧಾನದಲ್ಲಿ ಬೆಳೆಸಲು ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಹೆಚ್ಚಿನ ಆದಾಯ ಗಳಿಸುವ ದಾರಿ ಕಂಡುಕೊಂಡಿದ್ದಾರೆ.

ಡ್ರ್ಯಾಗನ್​ ಫ್ರೂಟ್ ಬೆಳೆಗೆ ಹೆಚ್ಚು ನೀರಿನ ಅಗತ್ಯ ಇಲ್ಲ. ರೋಗ ಬಾಧೆಯೂ ಕಡಿಮೆ. ಆರೈಕೆ ಮಾಡಲು ಜಾಸ್ತಿ ಶ್ರಮ ಪಡಬೇಕಿಲ್ಲ. ಮನೆಮಂದಿಯೆಲ್ಲ ಸೇರಿ ಕೃಷಿ ಕಾಯಕ ಕೈಗೊಂಡಲ್ಲಿ ಹೂಡಿದ ಬಂಡವಾಳವನ್ನು 2-3 ವರ್ಷದಲ್ಲೇ ವಾಪಸ್ ಪಡೆಯಬಹುದು. ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುವುದರಿಂದ ಆದಾಯ ನಿಶ್ಚಿತ. ಜತೆಗೆ ರಫ್ತಿಗೂ ವಿಪುಲ ಅವಕಾಶ ಇರುವುದರಿಂದ ಮಧ್ಯಮ ಪ್ರಮಾಣದ ರೈತರು ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ಕೈತುಂಬ ಸಂಪಾದನೆ ಮಾಡಬಹುದಾಗಿದೆ.

ಕೋಲಾರದ ಒಣ ಹವೆಗೆ ಡ್ರಾ್ಯಗನ್ ಫ್ರೂಟ್ ಬೆಳೆ ಹೇಳಿಮಾಡಿಸಿದಂತಿದೆ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಂಡವರು ಈ ಹಣ್ಣನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಆದಾಯ ದುಪ್ಪಟ್ಟು ಮಾಡಿಕೊಳ್ಳಬಹುದು. ಇತರ ಬೆಳೆಗಳಿಗೆ ವಹಿಸುವ ಕಾಳಜಿಯಂತೆ ಈ ಬೆಳೆಗೂ ಅನುಸರಿಸಿದರೆ ಸಾಕು. ಕೊಯ್ಲು ವೇಳೆ ಸ್ವಲ್ಪ ಹೆಚ್ಚಿಗೆ ಕೂಲಿಯಾಳುಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ನಿರಂತರ ಆರೈಕೆ ಹಾಗೂ ಶ್ರದ್ಧೆಯಿಂದ ಬೆಳೆ ಜೋಪಾನ ಮಾಡಿದಲ್ಲಿ ಡ್ರಾ್ಯಗನ್ ಫ್ರೂಟ್​ನಿಂದ ವ್ಯವಸಾಯದಲ್ಲಿ ಉನ್ನತಿ ಸಾಧಿಸಬಹುದು. ಎರಡು ವರ್ಷದ ಹಿಂದೆ ಕೋಲಾರದಲ್ಲಿ ರೈತರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಸಮಕ್ಷಮ ವಿಶೇಷ ಕಾರ್ಯಕ್ರಮ ರೂಪಿಸಿ ಹೊಸ ಪ್ರಭೇದದ ಹಣ್ಣುಗಳನ್ನು ಬೆಳೆಸಲು ಪೂರಕ ವಾತಾವರಣ ನಿರ್ವಿುಸಿದ್ದರು. ಆ ಬಳಿಕ ಹಲವು ರೈತರು ಡ್ರಾ್ಯಗನ್ ಫ್ರೂಟ್ ಬೆಳೆದು ಸಂಪಾದನೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ.

ಡ್ರ್ಯಾಗನ್ ಫ್ರೂಟ್ ಬೆಳೆಯನ್ನು 10/10 ಅಡಿ ಅಥವಾ 10/8 ಅಡಿ ಅಂತರ ದಲ್ಲಿ ನೆಡಬಹುದು. 5 ಅಡಿ ಎತ್ತರದ ಕಂಬದ ಮೇಲ್ಭಾಗಕ್ಕೆ ಗಡಿ ಬೆಳೆಯುತ್ತಿದ್ದಂತೆ 2ನೇ ವರ್ಷ ಫಸಲು ಕಾಣಬಹುದು. ಮೇನಿಂದ ಆಗಸ್ಟ್ ವರೆಗೆ ಹೂ ಬಿಡುತ್ತದೆ. ನವೆಂಬರ್​ವರೆಗೂ ಫಸಲು ಕೊಯ್ಲು ಮಾಡಬಹುದು. ಎರಡು ಗಿಡಗಳ ಮಧ್ಯದಲ್ಲಿನ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ಅಂತರ ಬೆಳೆಯಾಗಿ ಲಿಚ್ಚಿ ಗಿಡಗಳನ್ನು ಬೆಳೆಸಲಾಗಿದೆ. ಇವುಗಳನ್ನು ಬಿಹಾರದಿಂದ ಗಿಡವೊಂದಕ್ಕೆ 150 ರೂ. ಕೊಟ್ಟು ತರಿಸಿ ನೆಡಲಾಗಿದೆ. ಒಂದೇ ಪ್ರದೇಶದಲ್ಲಿ 1,000 ಲಿಚ್ಚಿ ಸಸಿಗಳನ್ನು ಕರ್ನಾಟಕದಲ್ಲಿ ಬೆಳೆಸುತ್ತಿರುವುದು ಇದೇ ಮೊದಲು. ಈ ಹಣ್ಣು ಕೆಜಿಗೆ 400 ರೂ. ದರ ಇದೆ. ಇದರಿಂದಲೂ ಹೆಚ್ಚಿನ ಆದಾಯ ಉಂಟು ಎಂದು ದೇವರಾಜ್ ತಿಳಿಸಿದ್ದಾರೆ.

25-30 ವರ್ಷದಿಂದಲೂ ರಾಗಿ, ಟೊಮ್ಯಾಟೊ, ಆಲೂಗಡ್ಡೆ, ಹೂಕೋಸು ಬೆಳೆಯುತ್ತಿದ್ದೆವು. ರಾಗಿ ಮನೆಗೆ ಬಳಕೆಯಾಗುತ್ತಿತ್ತು. ಟೊಮ್ಯಾಟೋ ಕೈಹಿಡಿದಿದ್ದು ಕಡಿಮೆಯೇ. ದರ ಇದ್ದಾಗ ಬೆಳೆ ಇಲ್ಲ, ಬೆಳೆ ಇದ್ದಾಗ ದರ ಇಲ್ಲ... ಅಂತಹ ಪರಿಸ್ಥಿತಿ ಅದರದು. ಎಷ್ಟು ದುಡಿದರೂ ವರಮಾನ ಕಡಿಮೆ. ವಂಶಪಾರಂಪರ್ಯವಾಗಿ ಬಂದಿರುವ ಕೃಷಿಯನ್ನು ಬಿಡಬಾರದು ಎಂಬ ಕಾರಣಕ್ಕೆ ವಾಣಿಜ್ಯ ಬೆಳೆಯಾಗಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಮನಸ್ಸು ಮಾಡಿದೆವು.

ಕೆಲ ಸ್ನೇಹಿತರ ಸಲಹೆ ಹಾಗೂ ಯೂಟ್ಯೂಬ್ ವೀಕ್ಷಣೆಯಿಂದ ಸಹಾಯವಾಯಿತು. ಆರಂಭದಲ್ಲಿ ತುಸು ಕಷ್ಟವಾಯಿತು. ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತು ನೆನಪಿಸಿಕೊಂಡು ಹೊಸ ಬೆಳೆಗೆ ಗಮನ ನೀಡಿದೆವು. ಎರಡು ಬೋರ್​ವೆಲ್ ನೀರನ್ನು ಕೃಷಿಹೊಂಡದಲ್ಲಿ ಸಂಗ್ರಹಿಸಿ ಅದರಿಂದ ಹನಿ ನೀರಾವರಿ ಮೂಲಕ ಅಗತ್ಯಕ್ಕೆ ತಕ್ಕಷ್ಟು ನೀರು ಹಾಯಿಸಿದೆವು. ಬೆಳೆ ಮೇಲೆ ನಿರಂತರ ನಿಗಾ ಇಟ್ಟು ಅಗತ್ಯ ಗೊಬ್ಬರ, ಒಂದಿಷ್ಟು ಔಷಧ ಸಿಂಪಡಿಸಿದೆವು. ಮೂರೇ ವರ್ಷದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಆದಾಯ ಬಂತು. ಆರು ಎಕರೆಯಲ್ಲಿ ಫಸಲನ್ನು ಸಮರ್ಪಕವಾಗಿ ಜೋಪಾನ ಮಾಡಿದ್ದರಿಂದ ಮೊದಲ ಬೆಳೆ 28 ಟನ್ ಇಳುವರಿ ಬಂತು. 2ನೇ ವರ್ಷದಲ್ಲಿ 50 ಟನ್ ಹಾಗೂ ಈ ವರ್ಷ 63 ಟನ್ ಫಸಲು ಕೈಸೇರಿತು. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಹಣ್ಣಿಗೆ 100-110 ರೂ.ನಂತೆ ಮಾರಿದೆವು. ಕಳೆದ 3 ದಶಕದಲ್ಲಿ ಕಾಣದಿದ್ದ ಆದಾಯ ಈ ಮೂರೇ ವರ್ಷದಲ್ಲಿ ಕೈಸೇರಿದ್ದರಿಂದ ಡ್ರಾ್ಯಗನ್ ಫ್ರೂಟ್ ಕೃಷಿ ಖುಷಿ ನೀಡಿದೆ ಎಂದು ಸಹೋದರರು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಣ್ಣೆ ಹಣ್ಣಿನಿಂದಲೂ ಆದಾಯ

ಕೃಷ್ಣಮೂರ್ತಿ ಸಹೋದರರು ಡ್ರಾ್ಯಗನ್ ಫ್ರೂಟ್ ಜತೆಗೆ ಬೆಣ್ಣೆ ಹಣ್ಣು (ಬಟರ್ ಫ್ರೂಟ್) ಕೂಡ ಬೆಳೆಯುತ್ತಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ 800 ಗಿಡಗಳನ್ನು ಬೆಳೆಸುತ್ತಿದ್ದಾರೆ. 12/12 ಅಡಿ ಅಂತರದಲ್ಲಿ ಗಿಡಗಳನ್ನು ನೆಟ್ಟು ನಿಯಮಿತವಾಗಿ ನೀರುಣಿಸಿ ಆರೈಕೆ ಮಾಡಬೇಕು. 3 ವರ್ಷದ ಬಳಿಕ ಬೆಳೆ ಕೈಸೇರಲಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಅಂತರ ಬೆಳೆಯಾಗಿ ಕಡಿಮೆ ಎತ್ತರದ ಬೆಳೆಯನ್ನು ಬೆಳೆದುಕೊಳ್ಳಬಹುದು. ಡ್ರಿಪ್ ಪದ್ಧತಿ ಅಳವಡಿಸಿಕೊಂಡಲ್ಲಿ ಕಡಿಮೆ ನೀರಿನಲ್ಲೂ ಹೆಚ್ಚು ಇಳುವರಿ ಪಡೆಯಬಹುದು ಎನ್ನುತ್ತಾರೆ ರೈತ ಕೃಷ್ಣಮೂರ್ತಿ. ಈ ಹಿಂದೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕೃಷ್ಣಮೂರ್ತಿ ವಿಆರ್​ಎಸ್ ಪಡೆದು ಸದ್ಯ ಪೂರ್ಣಪ್ರಮಾಣದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net