

ಇಂದಿಗೂ ಯಾರೂ ಖಚಿತವಾಗಿ, ನಿಖರವಾಗಿ ಹೇಳಲಾರರು. ಭಗವದ್ ಶಕ್ತಿ ಎಂಬುದು ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞತ್ವ ಹಾಗೂ ದಯಾ ಗುಣಗಳನ್ನು ಹೊಂದಿರುವಂತಹುದು ಎಂದು ವಿವರಣೆ ಅರಿಯುತ್ತೇವೆ. ಆದರೆ ಇಂಥದೇ ರೂಪದಲ್ಲಿರುವನು ಎಂಬ ಅಂಶವನ್ನು ಯಾರೂ ಅರಿಯರು. ಆಳವಾಗಿ ಅಧ್ಯಯನ ಮಾಡಿದಾಗ ನಿಜಕ್ಕೂ ಭಗವಂತನಿರುವನೇ? ಹಾಗಾದರೆ ಅವನ ರೂಪವೇನು? ಮುಂತಾದ ಪ್ರಶ್ನೆಗಳು ಬರದೇ ಇರಲಾರದು.
ಈ ಸಂದೇಹಗಳಿಗೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಅನೇಕಾನೇಕ ಉದಾಹರಣೆಗಳ ಮೂಲಕ ಭಗವಂತನ ಸ್ವರೂಪ, ಇರುವಿಕೆ ಇತ್ಯಾದಿಗಳಿಗೆ ಉತ್ತರವನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಭಗವಂತ ಸಾಕಾರನೂ ಹೌದು, ನಿರಾಕಾರನೂ ಹೌದು ಎಂದು ಸ್ಪಷ್ಟಪಡಿಸುತ್ತಾರೆ. ಸಂಸ್ಕೃದ ಮಾತಿನಂತೆ ಭಗವಂತನನ್ನು ಅಥವಾ ಭಗವತ್ ಶಕ್ತಿಯನ್ನು ಯಾವ ಮನಸ್ಸಿನಿಂದ ಚಿಂತಿಸುತ್ತೇವೋ ಅದನ್ನು ಪಡೆಯುತ್ತೇವೆ. ಯದ್ ಭಾವೋ ತದ್ ಭವತಿ. ಇದೇ ಪರಮಹಂಸರ ಬೋಧನೆ.
ಅದೊಂದು ಸತ್ಸಂಗದ ಸಂದರ್ಭ. ಭಕ್ತನೊಬ್ಬ , ಭಗವಂತ ಸಾಕಾರನೂ ಹೌದು, ನಿರಾಕಾರನೂ ಹೌದು ಎನ್ನುತ್ತಾರೆ, ಇದು ಹೇಗೆ? ಎಂದು ಕೇಳುತ್ತಾನೆ. ಅದಕ್ಕೆ ರಾಮಕೃಷ್ಣರ ಉತ್ತರ ಹೀಗಿತ್ತು: ದೇವರು ಸಾಕಾರ ರೂಪದಲ್ಲಿಯೂ, ನಿರಾಕಾರ ರೂಪದಲ್ಲಿಯೂ ಇರುವುದು ಸತ್ಯ. ಒಂದು ದಡವೇ ಗೋಚರಿಸದ ಮಹಾನ್ ಸಮುದ್ರವಿದೆ ಎಂದು ಭಾವಿಸು.
ಎಲ್ಲೆಲ್ಲಿಯೂ ಆ ವಿಶಾಲ ಸಾಗರದ ಮಧ್ಯೆ ಮಂಜುಗಡ್ಡೆಗಳು ತೇಲುತ್ತಿರುವುದನ್ನು ಊಹಿಸಿದಿರೋ, ವಿಪರೀತ ಶೀತದ ವಾತಾವರಣದಿಂದ ಅದೇ ಸಾಗರದ ಮಧ್ಯೆ ಮಂಜಿನ ಗಡ್ಡೆಗಳು ಗೋಚರಿಸುತ್ತವೆ. ಹಾಗೆಯೇ ನಿಷ್ಠೆ, ಶ್ರದ್ಧೆ, ಭಕ್ತಿಗಳಿಂದ ಭಗವಂತನನ್ನು ಆರಾಧಿಸುವವನಿಗೆ ದಿವ್ಯ ಶಕ್ತಿಯುಳ್ಳ ಅಖಿಲಕೋಟಿ ಬ್ರಹ್ಮಾಂಡನಾಯಕ ರೂಪವನ್ನು ಧರಿಸಿ ಪ್ರತ್ಯಕ್ಷನಾಗುತ್ತಾನೆ. ಅಗ್ನಿಗೆ ಯಾವುದೇ ರೂಪವಿಲ್ಲ. ನಿರ್ಧರಿತ ಪ್ರತೀಕವಿಲ್ಲ. ಆದರೆ ಅಗ್ನಿ ಧಗಧಗಿಸುವ ಸಂದರ್ಭದಲ್ಲಿ ನಾನಾ ರೀತಿಯ ರೂಪರೇಖೆಗಳಲ್ಲಿ ಗೋಚರಿಸುವಂತೆ ಹೇಗೆ ಒಂದು ನಿಶ್ಚಿತ ರೂಪವಿಲ್ಲದಾಗ್ಯೂ ಧಗಧಗಿಸುವಾಗ ಅಗ್ನಿರೂಪ ಹೊಂದಿದಂತೆ ಭಗವಂತನು ಅನೇಕ ಸಂದರ್ಭದಲ್ಲಿ ರೂಪ ಧರಿಸಿರುವಂತೆ ಸಾಕಾರ ರೂಪದಲ್ಲಿ ಗೋಚರಿಸುತ್ತಾನೆ.
ಭಗವಂತನು ಒಬ್ಬನೇ, ಆದರೆ ಅವನ ಅಂಶಗಳು ಅಪಾರ ರೂಪದಲ್ಲಿ ಗೋಚರಿಸುತ್ತವೆ. ಹೇಗೆ ಮನೆಯ ಯಜಮಾನ ಮನೆಯಲ್ಲಿ ನಾನಾ ರೂಪದಲ್ಲಿ ಗೋಚರಿಸುತ್ತಾನೆಯೋ ಹಾಗೆ. ಉದಾಹರಣೆಗೆ, ತಂದೆಯ ರೂಪದಲ್ಲಿ ಒಬ್ಬರಿಗೆ, ಅಣ್ಣನ ರೂಪದಲ್ಲಿ ಮತ್ತೊಬ್ಬರಿಗೆ, ಪತಿಯ ರೂಪದಲ್ಲಿ ಒಬ್ಬರಿಗೆ ಇತ್ಯಾದಿ. ಹಾಗೆಯೇ ದೇವರು ಒಬ್ಬನಾದರೂ ಆರಾಧಿಸುವವರಿಗೆ, ಅರ್ಚಿಸುವವರಿಗೆ, ಧ್ಯಾನಿಸುವವರಿಗೆ, ದಿವ್ಯ ಭಗವತ್ ಪ್ರೀತಿಯಿಂದ ಕಾಣುವವರಿಗೆ, ಅವರವರ ಭಾವಕ್ಕೆ ಗೋಚರಿಸುತ್ತಾನೆ.
ಪರಮಹಂಸರು ತಮ್ಮ ಬೋಧನೆಗಳಲ್ಲಿ ಈ ಅಂಶಗಳನ್ನು ತಮ್ಮ ಪ್ರತ್ಯಕ್ಷ ಶಿಷ್ಯರಿಗೆ ಮತ್ತೂ ಪರಿಣಾಮಕಾರಿಯಾಗಿ ವಿವರಿಸುತ್ತಿದ್ದರು. ಈ ನಿಟ್ಟಿನಲ್ಲಿ ಪರಮಹಂಸರ ಪ್ರತ್ಯಕ್ಷ ಶಿಷ್ಯ ತಪಸ್ವಿ ಸ್ವಾಮಿ ಶಾರದಾನಂದಜೀ ಅವರ ಜೀವನದಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಬಹುದು. ಅದೊಂದು ದಿನ ಶಾರದಾನಂದಜೀ ಮಹಾರಾಜರ ಬಳಿ ಇಬ್ಬರು ಯುವ ವಿಜ್ಞಾನಿಗಳು ಬರುತ್ತಾರೆ. ಸಂಭಾಷಣೆ ಮಾಡುತ್ತಾ ದೇವರ ಇರುವಿಕೆಯ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸುತ್ತಾರೆ.
ಆಗ ಸ್ವಾಮೀಜಿ, ಖಂಡಿತಾ ದೇವರು ಇದ್ದಾನೆ. ವೇದ, ಉಪನಿಷತ್ಗಳು, ಗೀತೆ, ಇತ್ಯಾದಿ ಗ್ರಂಥಗಳಲ್ಲಿ ಮಹಾನ್ ಋಷಿ ಮುನಿಗಳು ಇದನ್ನು ಹೇಳಿದ್ದಾರೆ ಎಂದರು. ಆಗ ಈ ಯುವ ವಿಜ್ಞಾನಿಗಳು ಬಹುಶಃ ಆ ಋಷಿಮುನಿಗಳು ತಪ್ಪು ಎಸಗಿದ್ದಿರಬಹುದು ಎನ್ನುತ್ತಾರೆ. ಆಗ ಶಾರದಾನಂದಜೀ ಮಹಾರಾಜರು, ‘ನೀವು ಇಂಗ್ಲೆಂಡನ್ನು ನೋಡಿಲ್ಲ, ಆದಾಗ್ಯೂ ಲಂಡನ್ ನಗರವನ್ನು ಮತ್ತು ಅದರ ಅದ್ಭುತವನ್ನು ವಿವರಿಸುತ್ತೀರಾ?’ ಎಂದು ಪ್ರಶ್ನಿಸುತ್ತಾರೆ. ಖಂಡಿತಾ ವಿವರಿಸುತ್ತೇವೆ.
ಕಾರಣ ಲಂಡನ್ ನಗರವನ್ನು ವೀಕ್ಷಿಸಿ ಬಂದ ಅನೇಕರು ತಮ್ಮ ಪ್ರವಾಸ ಕಥನವನ್ನು ಬರೆದು, ಅನುಭವಗಳನ್ನು ಹಂಚಿಕೊಂಡಿದ್ದಾರೆ’ ಎಂದು ವಿವರಿಸಿದರು. ಆಗ ಶಾರದಾನಂದಜೀ ಮಹಾರಾಜರು, ‘ನೀವು ಇಂಗ್ಲೆಂಡ್ ದೇಶಕ್ಕೆ ಭೇಟಿಯಿತ್ತಿಲ್ಲ, ಲಂಡನ್ ನಗರಕ್ಕೆ ಭೇಟಿಯಿತ್ತಿಲ್ಲವಾದಾಗ್ಯೂ ಯಾರೋ ಭೇಟಿಯಿತ್ತು ವಿವರಿಸಿದ್ದನ್ನು ಓದಿರುವಿರಿ ಎಂದರೆ ಆ ಪ್ರವಾಸ ಕಥನವನ್ನು ಬರೆದಿರುವವರನ್ನು ಪೂರ್ಣ ನಂಬಿ ಇಂಗ್ಲೆಂಡ್, ಲಂಡನ್ ಬಗ್ಗೆ ಅರಿತಿರುವಿರಿ.
ಹಾಗೆಯೇ ನಮ್ಮ ಮಹಾನ್ ಋಷಿ ಮುನಿಗಳು, ಮಂತ್ರದ್ರಷ್ಟಾರರು ತಾವು ಅನುಭವಿಸಿದ ಬ್ರಹ್ಮಾನಂದ ಪರಿಚಯವನ್ನು ವೇದವೇದಾಂತಗಳಲ್ಲಿ ತಿಳಿಸಿದ್ದಾರೆ. ಹಾಗೆಯೇ ನಾವು ಅವುಗಳನ್ನು ಪೂರ್ಣವಾಗಿ ಸ್ವೀಕರಿಸಿ ಭಗವಂತನ ಇರುವಿಕೆಯನ್ನು ಪೂರ್ಣವಾಗಿ ನಂಬಿ ಸಾಧನೆಯಲ್ಲಿ ಮುಳುಗಿದ್ದೇವೆ’ ಎಂದಾಗ ಯುವ ವಿಜ್ಞಾನಿಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಪರಮಹಂಸರೂ ತಾವು ಭವತಾರಿಣಿಯ ಸಾಕ್ಷಾತ್ಕಾರ ಪಡೆದ ನಂತರ ನೀವೂ ಭಗವತಿಯನ್ನು ಕಾಣಬಹುದು ಎಂದು ಸ್ಪಷ್ಟವಾಗಿ ಭೋಧಿಸುತ್ತಾರೆ. (ಪ್ರತಿಕ್ರಿಯಿಸಿ: vvsudina@gmail.com)