

ಬೆಂಗಳೂರು: ರಾಜ್ಯದ ಜನರ ಆರೋಗ್ಯ ರಕ್ಷಣೆ ಜತೆಗೆ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಷರತ್ತುಬದ್ಧ ಸಾಂಕೇತಿಕ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅಶೋಕ್, ಆಯಾ ಗಣೇಶೋತ್ಸವ ಸಮಿತಿಗಳ ಜತೆಗೆ ಜಿಲ್ಲಾಧಿಕಾರಿಗಳು ಚರ್ಚಿಸಿ ನೀಡಲಿರುವ ವರದಿ ಹಾಗೂ ತಜ್ಞರು ನೀಡುವ ಸಲಹೆಗಳನ್ನು ಆಧರಿಸಿ ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ, ಸಂಘ-ಪರಿವಾರ ಪರವಿರುವ ಅಥವಾ ಯಾವುದೇ ಸಂಘಟನೆಗಳ ಒತ್ತಾಯವಿರಲಿ. ಕರೊನಾ ಸಂಕಷ್ಟ ಕಾಲದಲ್ಲಿ ಪೂರ್ವಾಪರ ಯೋಚಿಸಬೇಕಾಗುತ್ತದೆ. ಕೇರಳದಲ್ಲಿ ಓಣಂ ಹಬ್ಬ ಆಚರಣೆಗೆ ಅವಕಾಶ ಕೊಟ್ಟಿದ್ದರಿಂದ ಆ ರಾಜ್ಯದಲ್ಲಿ ಸೋಂಕು ಉಲ್ಬಣಿಸಿದೆ ಎಂಬ ಆಪಾದನೆಗಳಿದ್ದು, ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದರು.
ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡುವುದಾದರೆ ಮೆರವಣಿಗೆ, ಮನರಂಜನೆ, ನೂರಾರು ಜನರು ಸೇರಿಸುವ ಕಾರ್ಯಕ್ರಮಗಳು ಹೊರತಾದ ಸರಳ ಹಾಗೂ ಷರತ್ತುಬದ್ಧ ಪರವಾನಗಿ ನೀಡಬಹುದು ಎಂಬ ಅಭಿಪ್ರಾಯಗಳನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಿದೆ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.
ವಿಶೇಷ ಮಾರ್ಗಸೂಚಿ: ಕೇರಳದಲ್ಲಿ ಸೋಂಕು ಪ್ರಕರಣಗಳು ಹೆಚ್ಚಿರುವ ಕಾರಣ ಆ ರಾಜ್ಯದ ಗಡಿಗೆ ಹೊಂದಿಕೊಂಡ ನಮ್ಮ ಜಿಲ್ಲೆಗಳ ರಕ್ಷಣೆ ಜವಾಬ್ದಾರಿ ಸರ್ಕಾರದ್ದಾಗಿದೆ, ಕೇರಳದಿಂದ ಬರುವವರಿಗೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್, ನಂತರ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿ ಸಿಎಂ ಅಧ್ಯಕ್ಷತೆಯ ಸೋಮವಾರದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಗಡಿಗೆ ಹೊಂದಿಕೊಂಡ ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಆಡಳಿತಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.
ಕೇರಳದಿಂದ ಪ್ರತಿನಿತ್ಯ ಬಂದು ಹೋಗುವವರು, ವಿದ್ಯಾರ್ಥಿಗಳು ಒಳಗೊಂಡಂತೆ ವಿಶೇಷ ಮಾರ್ಗಸೂಚಿಯನ್ನು ಆಯಾ ಜಿಲ್ಲಾಧಿಕಾರಿಗಳು ಹೊರಡಿಸಲಿದ್ದಾರೆ ಎಂದು ಆರ್.ಅಶೋಕ್ ವಿವರಿಸಿದರು.