

ರಂಗಾಯಣದ ಭೂಮಿಗೀತ ರಂಗವೇದಿಕೆಯಲ್ಲಿ ಸೆ.15 ರಂದು ಸಂಜೆ 6.30ಕ್ಕೆ ‘ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಶ್ರವಣ್ ಹೆಗ್ಗೋಡು ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ ತಂಡ ನಾಟಕವನ್ನು ಪ್ರಸ್ತುತ ಪಡಿಸಲಿದೆ.
ಆಗ ತಾನೆ ಪಧೋನ್ನತಿಯಾಗಿ ಕಮಾಂಡೆಂಟ್ ಆದ ನಾಜಿ ಅಧಿಕಾರಿಯ ಮಗ 8 ವರ್ಷದ ಹುಡುಗ ಅಲೆಕ್ಸ್, ಅದೇ ವಯಸ್ಸಿನ ಯಹೂದಿ ಹುಡುಗ ಈತನ್ ಹಾಗೂ ಟಿಂಬೋ ಎಂಬ ಪುಟ್ಟ ಮರಿ ಆನೆ ಮೂವರನ್ನೂ ಪೋಲೆಂಡ್‌ನ ಕಾನ್ಸಂಟ್ರೇಷನ್ ಕ್ಯಾಂಪ್‌ನ ಮುಳ್ಳುಬೇಲಿ ಪ್ರತ್ಯೇಕಿಸುತ್ತದೆ. ಆದರೂ ಅವರು ತಮ್ಮ ಸುತ್ತಮುತ್ತಲಿನ ನೈಜ ಸ್ವರೂಪವನ್ನು ಮರೆತು ಗಾಢವಾದ ಸ್ನೇಹ ಬಂಧಕ್ಕೆ ಒಳಪಡುವುದರ ಬಗ್ಗೆ ಮತ್ತು ಅದರ ಪರಿಣಾಮವಾಗಿ ಅವರಿಗೆ ಆದ ಘೋರ ಅನ್ಯಾಯದ ಸುತ್ತ ಈ ನಾಟಕ ಹರಿದಾಡುತ್ತದೆ.
ಈ ನಾಟಕವು ಎರಡನೇ ಮಹಾಯುದ್ಧದ ಸುತ್ತ ನಡೆದ ಹಲವು ಕಾಲ್ಪನಿಕ ಹಾಗೂ ನೈಜ ಕಥೆಗಳ ಸ್ಫೂರ್ತ ವಿಸ್ತರಣೆ ಆಗಿದ್ದು, ಜರ್ಮನಿಯ ನಾಜಿ ಆಡಳಿತದಿಂದಾದ ಜೀವಗಳ ಹತ್ಯಾಕಾಂಡದ ಚಿತ್ರಣವನ್ನು ಇಬ್ಬರು ಮುಗ್ಧ ಬಾಲಕರ ಮನಸ್ಸುಗಳ ದೃಷ್ಟಿಕೋನದಲ್ಲಿ ಚಿತ್ರಿಸಲು ನಾಟಕ ಪ್ರಯತ್ನಿಸುತ್ತದೆ.