ನಾಲ್ಕರ ಪೋರ ದಾಖಲೆ ವೀರ

13 svr 01 a
Published on

ಸವಣೂರ: ತಾಲೂಕಿನ ಯಲವಿಗಿ ಗ್ರಾಮದ ನಾಲ್ಕು ವರ್ಷದ ಬಾಲಕ ನಿಖಿಲ್​ಗೌಡ ಹಿರೇಗೌಡ ಪಾಟೀಲ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ 2020-21 ದಾಖಲೆ ಮುಡಿಗೇರಿಸಿಕೊಂಡಿದ್ದಾನೆ.

ದೇಶದ ಎಲ್ಲ ರಾಜಧಾನಿಗಳು, ಆರಂಭದಿಂದ ಇಲ್ಲಿಯವರೆಗಿನ ಎಲ್ಲ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳ ಹೆಸರುಗಳನ್ನು ತಡವರಿಸದೆ ಸರಾಗವಾಗಿ ತುಂಬಾ ಚೆನ್ನಾಗಿ ನಿಖಿಲ್ ಹೇಳುತ್ತಾನೆ. ಆರಂಭದಿಂದಲೇ ಅವನ ಜ್ಞಾಪಕಶಕ್ತಿ ಗುರುತಿಸಿದ ತಾಯಿ ಮಂಜುಳಾ ಹಾಗೂ ತಂದೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹಿರೇಗೌಡ ಪಾಟೀಲ ಬಿಡುವಿನ ವೇಳೆಯಲ್ಲಿ ತರಬೇತಿ ನೀಡಿದ್ದಾರೆ. ರಾಷ್ಟ್ರೀಯ ಚಿಹ್ನೆಗಳು, ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳನ್ನು ಗುರುತಿಸುತ್ತಾನೆ. ಗಣಿತ ಆಕೃತಿ ಗುರುತಿಸಿ ಬರೆಯುವುದು, ಬಣ್ಣಗಳನ್ನು ಗುರುತಿಸುವುದು, ವಿಶ್ವದ ಏಳು ಖಂಡ ಹೇಳುತ್ತಾನೆ. ಡಾಕ್ಟರ್, ಟೀಚರ್, ಡ್ರೈವರ್, ಕಂಡಕ್ಟರ್, ಟೈಲರ್, ಪೋಸ್ಟ್ ಮ್ಯಾನ್ ಸೇರಿ ಇಂಗ್ಲಿಷ್​ನಲ್ಲಿ ಪಟಪಟನೆ ಸರಾಗವಾಗಿ 24 ವೃತ್ತಿಗಳ ಹೆಸರು ಹೇಳುತ್ತಾನೆ.

ನಿಖಿಲ್​ಗೌಡಗೆ ಪ್ರಾಣಿ- ಪಕ್ಷಿಗಳೆಂದರೆ ತುಂಬಾ ಪ್ರೀತಿ. ಇವುಗಳ ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳುವುದೆಂದರೆ ಈತನಿಗೆ ತುಂಬಾ ಕುತೂಹಲ. 40 ಪ್ರಾಣಿಗಳನ್ನು ಗುರುತಿಸುತ್ತಾನೆ. ಸಾಮಾನ್ಯ ಜ್ಞಾನದ ಬಗ್ಗೆ ಒಂದೇ ಬಾರಿ ಹೇಳಿದರೆ ಸಾಕು, ತುಂಬಾ ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾನೆ.

ನಿಖಿಲ್​ಗೌಡ ಪ್ರಶ್ನೆ ಮಾಡದೆ ಏನನ್ನೂ ಒಪ್ಪಿಕೊಳ್ಳುವುದಿಲ್ಲ. ಒಂದು ವರ್ಷದನಿದ್ದಾಗಲೇ ಪುಸ್ತಕ ನೋಡಲು ತುಂಬಾ ಇಷ್ಟಪಡುತ್ತಿದ್ದ. ಪುಸ್ತಕದಲ್ಲಿನ ಚಿತ್ರಗಳನ್ನು ಗುರುತಿಸುತ್ತಿದ್ದ ಹಾಗೂ ಕೇಳಿ ತಿಳಿದುಕೊಳ್ಳುತ್ತಿದ್ದ. ಇವನಿಗೆ ಸೇತುವೆ, ಮನೆ ನಿರ್ಮಾಣ ಮಾಡುವುದೆಂದರೆ ತುಂಬಾ ಇಷ್ಟ. ಕಲ್ಲಿನಲ್ಲಿ ಮನೆ ಕಟ್ಟುವ, ಸೇತುವೆ ಕಟ್ಟುವ ಆಟ ಆಡುತ್ತಾನೆ. ಭೂಮಿ, ಹಗಲು-ರಾತ್ರಿ, ಗ್ರಹ, ಗ್ರಹಣಗಳ ಬಗ್ಗೆ ಕುತೂಹಲದಿಂದ ನೂರೆಂಟು ಪ್ರಶ್ನೆ ಕೇಳುತ್ತಾನೆ. ಇವನಿಗೆ ಪೇಂಟಿಂಗ್ ಮಾಡುವುದು ಇಷ್ಟ. ಇವನ ಜ್ಞಾಪಕಶಕ್ತಿಯ ಪ್ರತಿ ಪ್ರದರ್ಶನದ ವಿಡಿಯೋ ತುಣುಕುಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ (ಹರಿಯಾಣ) ಕಳುಹಿಸಲಾಗಿತ್ತು. ಅಲ್ಲಿ ಆಯ್ಕೆಗೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್- 2020 ಅನ್ನು ಮುಡಿಗೇರಿಸಿಕೊಂಡಿದ್ದಾನೆ. ನಿಖಿಲ್​ಗೌಡ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಇದ್ದು, ತುಂಬಾ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 4 ವರ್ಷದ ನಿಖಿಲ್​ಗೌಡ ಸವಣೂರಿನ ಖಾಸಗಿ ಶಾಲೆಯಲ್ಲಿ ಪೂರ್ವ ಪ್ರಾರ್ಥಮಿಕ ಶಿಕ್ಷಣ ಪಡೆಯುತ್ತಿದ್ದಾನೆ.

ಮಗನ ಜ್ಞಾಪಕಶಕ್ತಿ ತುಂಬಾ ಚೆನ್ನಾಗಿ ಇರುವುದನ್ನು ಕಂಡು, ಮನೆಯಲ್ಲಿ ತರಬೇತಿ ನೀಡಿದ್ದೇವು. ಇಂಡಿಯಾ ಬುಕ್ ಆಫ್ ರೆಕಾರ್ಡ್ 2020-21 ಒಲಿದು ಬಂದಿರುವುದು ನಮ್ಮ ಕುಟುಂಬಕ್ಕೆ ತುಂಬಾ ಖುಷಿಯಾಗಿದೆ.| ಮಂಜುಳಾ ಹಿರೇಗೌಡ ಪಾಟೀಲ ಬಾಲಕನ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net