

ಶಿವಮೊಗ್ಗ: ಮಧ್ಯ ಕರ್ನಾಟಕದ ಮೊದಲ, ರಾಜ್ಯದ ಒಂಬತ್ತನೇ ವಿಮಾನ ನಿಲ್ದಾಣ ಶಿವಮೊಗ್ಗದ ಕುವೆಂಪು ಏರ್‌ಪೋರ್ಟ್‌ನಿಂದ ಗುರುವಾರ ಅಧಿಕೃತವಾಗಿ ನಾಗರಿಕ ವಿಮಾನಯಾನ ಸೇವೆ ಆರಂಭವಾಯಿತು. ಇಂಡಿಗೋ ಎಟಿಆರ್-72 ವಿಮಾನ ಬೆಳಗ್ಗೆ 10.55ಕ್ಕೆ ಬೆಂಗಳೂರಿನಿಂದ ಬಂದಿಳಿಯುತ್ತಿದ್ದಂತೆ ವಾಟರ್ ಸೆಲ್ಯೂಟ್ ನೀಡಿ ಸ್ವಾಗತಿಸಲಾಯಿತು. ಈ ಮೂಲಕ ಮಲೆನಾಡಿನ ದಶಕಗಳ ವಾಯುಯಾನ ಸೇವೆ ಕನಸು ನನಸಾಯಿತು.
ಗುರುವಾರ ಮೊದಲ ವಿಮಾನದಲ್ಲಿ ಬೆಂಗಳೂರಿನಿಂದ ಆಗಮಿಸಿ ಟರ್ಮಿನಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಮಾನ ನಿಲ್ದಾಣದ ರೂವಾರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಆಸಕ್ತಿ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನದಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಧಿಕೃತವಾಗಿ ವಿಮಾನ ಸಂಚಾರ ಆರಂಭವಾಗಿದೆ. ಜಿಲ್ಲೆಯ ಜನರ ಅಪೇಕ್ಷೆಗಳನ್ನು ಈಡೇರಿಸಿದ ಸಂತೃಪ್ತಿಯಿದೆ ಎಂದು ಹೇಳಿದರು.
ಜಿಲ್ಲೆಯ ಜನತೆರ ಹಲವು ವರ್ಷಗಳ ಕನಸು ಈಗ ನನಸಾಗಿದೆ. ಏರ್‌ಪೋರ್ಟ್‌ನಿಂದಾಗಿ ಆರ್ಥಿಕ ಅಭಿವೃದ್ಧಿಯಾಗಲಿದೆ. ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಏರ್‌ಪೋರ್ಟ್‌ನಿಂದ ಅನುಕೂಲವಾಗಲಿದೆ. ಶಿವಮೊಗ್ಗ ಮಾತ್ರವಲ್ಲೇ ಸುತ್ತಮುತ್ತಲ ಜಿಲ್ಲೆಗಳ ಜನರಿಗೂ ಇದರ ಪ್ರಯೋಜನ ದೊರೆಯಲಿದೆ. ಕೆಲ ವರ್ಷಗಳಲ್ಲೇ ಇದು ಅಂತರಾಷ್ಟ್ರೀಯ ಮಟ್ಟದ ಏರ್‌ಪೋರ್ಟ್ ಆಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.