ಆಸ್ತಿ ವಿವಾದದಲ್ಲಿ ಐದು ವರ್ಷದ ಬಾಲಕನನ್ನು ಗುಂಡಿಕ್ಕಿ ಹತ್ಯೆ!

crime
Published on

ಬಿಹಾರ: ಆರ್ಯನ್ ಕುಮಾರ್ ಎಂಬ ಬಾಲಕ ಮನೆಯ ಹೊರಗೆ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಓಡಿ ಹೋಗಿರುವ ಘಟನೆ ಬಿಹಾರ ರಾಜ್ಯದ ಸಮಸ್ತಿಪುರ ಜಿಲ್ಲೆಯ ಸಿಹ್ಮಾ ಗ್ರಾಮದಲ್ಲಿ ನಡೆದಿದೆ.

ಗುಂಡೇಟು ತಿಂದು ಆರ್ಯನ್ ರಕ್ತದ ಮಡುವಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾಗ ಆತನ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಬೆಚ್ಚಿಬಿದ್ದ ಮನೆಯವರು ಆತನನ್ನು ಹಸನಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಆದರೆ ಅಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು ಆರ್ಯನ್ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲಿಂದ ಆರ್ಯನ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆರ್ಯನ್ ಕುಮಾರ್ ಬಿಪಿನ್ ಕುಮಾರ್ ಎಂಬುವವರ ಪುತ್ರ. ಬಿಹಾರ ರಾಜ್ಯದ ಸಮಸ್ತಿಪುರ ಜಿಲ್ಲೆಯ ಸಿಹ್ಮಾ ಗ್ರಾಮದವರಾದ ಬಿಪಿನ್ ಕುಮಾರ್ ಮತ್ತು ನೆರೆಹೊರೆಯವರ ನಡುವೆ ಜಮೀನು ವಿವಾದವಿತ್ತು ಎಂದು ತಿಳಿದುಬಂದಿದೆ. ಅದೇ ದ್ವೇಷದಿಂದಲೇ ಹದಿನೆಂಟರ ಹರೆಯದ ಯುವಕನೊಬ್ಬ ಆರ್ಯನ್ ಕುಮಾರ್​​​​ನನ್ನು ಗನ್​​​​​ನಿಂದ ಹೊಡೆದು ಕೊಂದು ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net