ಮೂರು ಅಂತಸ್ತಿನ ಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ

china fire accident
Published on

ಬೆಂಗಳೂರು: ಚಿಕ್ಕಪೇಟೆ ಸಮೀಪದ ಸುಗಂಧದ್ರವ್ಯ ಹಾಗೂ ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಮೆಟ್ರೋ ನಿಲ್ದಾಣ ಹಿಂಭಾಗದ ರಸ್ತೆಯಲ್ಲಿರುವ ಮೂರು ಅಂತಸ್ತಿನ ಮಹಡಿ ಕಟ್ಟಡದಲ್ಲಿ ಸುಗಂಧದ್ರವ್ಯ ಹಾಗೂ ಪ್ಲಾಸ್ಟಿಕ್ ವಸ್ತುಗಳ ಗೋಡೌನ್ ಇದೆ. ಭಾನುವಾರ ಮುಂಜಾನೆ ೨.೧೫ರ ಸುಮಾರಿಗೆ ಗೋಡೌನ್‌ಗೆ ಬೆಂಕಿ ಬಿದ್ದಿದ್ದು, ದಟ್ಟವಾದ ಹೊಗೆ ಕಂಡು ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮೂರು ವಾಹನಗಳ ಜತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಸುಮಾರು ೩-೪ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದರಿಂದ ಮತ್ತೆ ನಾಲ್ಕು ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸಂಜೆ ೫ ಗಂಟೆವರೆಗೂ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ಇದುವರೆಗೂ ಯಾರು ದೂರು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಡೌನ್‌ನಲ್ಲಿ ಸುಗಂಧದ್ರವ್ಯದ ಬಾಟಲಿಗಳು ತುಂಬಿದ್ದರಿಂದ ಬೆಂಕಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪ್ರತಿ ಬಾಟಲಿಗಳು ಹೊಡೆದುಕೊಂಡಾಗ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಲೇ ಇತ್ತು. ಮೂರು ಅಂತಸ್ತಿನ ಕಟ್ಟಡದಲ್ಲಿದ್ದ ಸುಗಂಧದ್ರವ್ಯದ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳು ಬೆಂಕಿಗೆ ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net