

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಯಾಂಡಲ್ವುಡ್ ನಟ ಸಂಚಾರಿ ವಿಜಯ್ ಅಗಲಿಕೆ ನೋವು ಇನ್ನೂ ಹಸಿಯಾಗೆ ಇದೆ. ಅವರ ಅಭಿಮಾನಿಗಳು, ಸ್ನೇಹಿತರು, ಆಪ್ತರು ವಿಜಯ್ ಫೋಟೋಗಳನ್ನು ಶೇರ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಅವುಗಳನ್ನ ನೋಡುತ್ತಿದ್ದರೆ ವಿಜಯ್ ನೆನಪು ಕಣ್ತುಂಬಿ ಬರುತ್ತೆ. ಈ ವೇಳೆ ನಟ ಸತೀಶ್ ನೀನಾಸಂ ಅವರು ಸಾಮಾಜಿಕ ಜಾಲತಾಣದಲ್ಲಿ ವಿಜಯ್ರ ಅಪರೂಪದ ವಿಡಿಯೋ ತುಣಕನ್ನು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ವಿಜಯ್ ಸಾವಿಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ.
ವಿಜಯ್ ಬದುಕಿದ್ದಾಗ ಕರೊನಾ ಸಂಕಷ್ಟ ಕಾಲದಲ್ಲಿ ಬಡವರ ಹಸಿವು ನೀಗಿಸಲು ಶ್ರಮಿಸಿದ್ದರು. ಆಹಾರ ಕಿಟ್ ವಿತರಣೆ ಜತೆಗೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದರು. ಇಂತಹ ಮಾನವೀಯ ಗುಣಗಳನ್ನು ಸತೀಶ್ ನೀನಾಸಂ ನೆನಪಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಏನಿದೆ?: ಚೀಲಕ್ಕೆ ಅಕ್ಕಿ ತುಂಬುತ್ತಿದ್ದ ವಿಜಯ್ಗೆ ತಮಾಷೆ ಮಾಡಿದ ಸತೀಶ್, 'ರೇಷನ್ ತುಂಬುತ್ತಿರುವುದನ್ನು ನೋಡಿದ್ರೆ ನಿಮಗೆ ಇದರಲ್ಲೂ ನ್ಯಾಷನಲ್ ಅವಾರ್ಡ್ ಬಂದರೂ ಬರಬಹುದು' ಎಂದಿದ್ದಾರೆ. ಇದಕ್ಕೆ ವಿಜಯ್, 'ಹೌದೌದು, ಅದು ನ್ಯಾಷನಲ್ ಅವಾರ್ಡ್ ಅಲ್ಲ, ರೇಷನಲ್ ಅವಾರ್ಡ್' ಎಂದು ತಮಾಷೆ ಮಾಡುತ್ತಾ ನಕ್ಕಿದ್ದಾರೆ.
ಜೂ.12ರ ರಾತ್ರಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಕೋಮಾಗೆ ತಲುಪಿದ್ದ ವಿಜಯ್ ಜೂ.15ರ ಬೆಳಗಿನ ಜಾವ 3.34ಕ್ಕೆ ಕೊನೆಯುಸಿರೆಳೆದಿದ್ದರು. ವಿಜಯ್ರ ಅಂಗಾಂದವನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ. ವಿಜಯ್ ಬದುಕಿದ್ದಾಗಲೂ ಸಾಮಾಜಿಕ ಕಳಕಳಿ ಹೊಂದಿದ್ದರು. ಸತ್ತ ಮೇಲೂ ಹಲವರಿಗೆ ಜೀವದಾನ ನೀಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.