

ಶ್ರೀನಿವಾಸಪುರ: ತಾಲೂಕಿನ ಗುಂತವಾರಿಪಲ್ಲಿ ಗ್ರಾಮದ ಮಂಜುನಾಥ್ ಹಾಗೂ ಕೂಳಗೂರ್ಕಿಯ ಶ್ರೀಮೂರ್ತಿ ಇಬ್ಬರ ನಡುವೆ ಹಣಕಾಸು ವಿಚಾರವಾಗಿ ಸೋಮವಾರ ಗಲಾಟೆ ಶುರುವಾಗಿ ತಡರಾತ್ರಿ ಮಂಜುನಾಥ್ ಕೊಲೆಯಲ್ಲಿ ಅಂತ್ಯಗೊAಡಿದ್ದು, ಮಂಗಳವಾರ ಸೋಮಯಾಜಲಹಳ್ಳಿಯಲ್ಲಿ ಬೂದಿಮುಚ್ಚಿದ ಕೆಂಡದಂತಾಗಿದ್ದು, ಗುಂತವಾರಿಪಲ್ಲಿಯ ಪೊಲೀಸರು, ಎಸ್‌ಪಿ ಬಿ.ನಿಖಿಲ್ ಅವರಿಂದ ಹಿಡಿದು ತಾಲೂಕಿನ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
ಸೋಮವಾರ ಕೊಲೆಯಾಗಿದ್ದು, ಮಂಗಳವಾರ ಬೆಳಗ್ಗೆ ಸಂಸ್ಕಾರ ಮಾಡದೆ ಶವ ಪಟ್ಟಣದ ಪೊಲೀಸ್ ಠಾಣೆಯ ಬಳಿ ಇಟ್ಟು ಕೆಲ ಸಮಯ ಆರೋಪಿಯನ್ನು ಬಂಧಿಸುವಂತೆ ನಾಯಕ ಸಮುದಾಯದ ಮುಖಂಡರು ಆಗ್ರಹಿಸಿದರು. ನಂತರ ಪೊಲೀಸರು ಮುಖಂಡರನ್ನು ಸಮಾಧಾನಪಡಿಸಿ ಗುಂತವಾರಿಪಲ್ಲಿಗೆ ಮೃತದೇಹ ತರಲಾಯಿತು.
ಘಟನೆ ವಿವರ: ಮೃತ ಮಂಜುನಾಥ್ ಹಾಗೂ ಕೂಳಗೂರ್ಕಿಯ ಶ್ರೀಮೂರ್ತಿ ಇಬ್ಬರು ಹಣಕಾಸು ವಿಚಾರವಾಗಿ ಆಂಧ್ರದ ರಾಮಸಮುದ್ರಂನಲ್ಲಿ ಸೋಮವಾರ ಕಿತ್ತಾಡಿಕೊಂಡಿದ್ದಾರೆ. ಇಬ್ಬರು ಊರಿಗೆ ವಾಪಸ್ಸು ಬಂದು ಮತ್ತೆ ಸಂಜೆ ಇಬ್ಬರು ಸೋಮಯಾಜಲಹಳ್ಳಿ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಹೆಸರಿನಲ್ಲಿ ಸೇರಿದ್ದಾರೆ. ಅಲ್ಲಿ ಮತ್ತೆ ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮೂರ್ತಿ ಕೈಯಲ್ಲಿದ್ದ ಚಾಕುವಿನಿಂದ ಇರಿದಿದ್ದಾಗಿ ಹೇಳಲಾಗಿದ್ದು, ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಹೋರಬರಬೇಕಾಗಿದೆ.
ಕೊಲೆಯಿಂದ ಆಕ್ರೋಶಗೊಂಡ ಮೃತ ಮಂಜುನಾಥ್ ಅವರ ಕುಟುಂಬಸ್ಥರು ಕೂಳಗೂರ್ಕಿಯಲ್ಲಿನ ಶ್ರೀಮೂರ್ತಿ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾಗ, ಸಕಾಲದಲ್ಲಿ ಪೊಲೀಸರು ಆಗಮಿಸಿ ಗುಂಪನ್ನು ಚದುರಿಸಿದ್ದಾರೆ.
ಮೃತ ಮಂಜುನಾಥ್‌ಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಗ್ರಾಮದ ಹಿಂದು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಸ್ಥಳಕ್ಕೆ ಸೋಮವಾರ ರಾತ್ರಿ ಐಜಿಪಿ ರಾಬೂರಾಮ್, ಅಡಿಷನಲ್ ಎಸ್ಪಿ ರವಿಶಂಕರ್, ಡಿವೈಎಸ್‌ಪಿ ನಂದಕುಮಾರ್, ಮಂಗಳವಾರ ಕೋಲಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಭೇಟಿ ನೀಡಿದರು.
ಕೋಟ್...
ಶ್ರೀಮೂರ್ತಿ ಹಾಗೂ ಮಂಜುನಾಥ್ ನಡುವೆ ಹಣಕಾಸು ವ್ಯವಹಾರದಲ್ಲಿ ಕೊಲೆಯಾಗಿರುವ ಬಗ್ಗೆ ಪ್ರಾಥಮಿಕ ತನಿಖÉಯಲ್ಲಿ ಕಂಡು ಬಂದಿದ್ದು, ಮೃತ ಮಂಜುನಾಥ್ ಮನೆಯವರು ಶ್ರೀಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಮಧ್ಯಪ್ರವೇಶಿಸಿ ಯಾವುದೇ ಪ್ರಾಣಹಾನಿಯಾಗದಂತೆ ತಡೆದಿದ್ದು, ಶೀಘ್ರ ಆರೋಪಿಯನ್ನು ಬಂಽಸಲಾಗುವುದು.
- ಬಿ.ನಿಖಿಲ್, ಎಸ್‌ಪಿ ಕೋಲಾರ
ಕೋಟ್...
ಇದು ಹಣಕ್ಕಾಗಿ ನಡೆದಿರುವ ವೈಯಕ್ತಿಯ ಕೊಲೆ. ರಾಜಕೀಯ ಪ್ರೇರಿತ ಕೊಲೆಯಲ್ಲ. ಈ ಕುರಿತು ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಘಟನೆ ಕುರಿತು ಅಪಪ್ರಚಾರ ಮಾಡಿ ತಾಲೂಕಿನ ಶಾಂತಿ ಕೆಡಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
- ಜಿ.ಕೆ ವೆಂಕಟಶಿವಾರೆಡ್ಡಿ , ಶಾಸಕ