ಮಕ್ಕಳಾಟದ ಜಗಳ ಬಾಲಕನ ಕೊಲೆಯಲ್ಲಿ ಅಂತ್ಯ!

Murder (2) (1)
Published on

ಬೆಂಗಳೂರು: ಆಟ ಆಡುವಾಗ ಮಕ್ಕಳ ನಡುವೆ ಉಂಟಾದ ಜಗಳದ ವಿಚಾರಕ್ಕೆ ಪಕ್ಕದ ಮನೆಯ ಬಾಲಕನನ್ನು ಅಪಹರಿಸಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ರಮಾನಂದ (8) ಕೊಲೆಯಾದ ಬಾಲಕ. ಈತನ ಹತ್ಯೆ ಮಾಡಿದ ಬಿಹಾರ ಮೂಲದ ಆರೋಪಿ ಚಂದೇಶ್ವರ್ ಎಂಬಾತನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಾ.ರಾ. ಾತೀಮಾ ಮಾಹಿತಿ ನೀಡಿದ್ದಾರೆ.

ಬಿಹಾರ ಮೂಲದ ನಾಥನ್ ಸಹಾನಿ ದಂಪತಿಗೆ ರಮಾನಂದ ಸೇರಿ ಇಬ್ಬರು ಮಕ್ಕಳು ಇದ್ದರು. ಸಹಾನಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಹೋಗುತ್ತಿದ್ದರೆ, ಪತ್ನಿ ಅಪಾರ್ಟ್‌ಮೆಂಟ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆರೋಪಿ ಚಂದೇಶ್ವರ್ ಸಹ ಸೆಕ್ಯುರಿಟಿ ಗಾರ್ಡ್ ಆಗಿದ್ದು, ಈತನ ಪತ್ನಿ ಮನೆಗೆಲಸಕ್ಕೆ ಹೋಗುತ್ತಿದ್ದಳು. ಈ ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಬಿಹಾರ ಮೂಲದ ಈ ಎರಡು ಕುಟುಂಬ, ಪರಪ್ಪನ ಅಗ್ರಹಾರದ ರಾಯಸಂದ್ರ ದೊಡ್ಡಮರದ ಬಳಿ ಶೆಡ್‌ನಲ್ಲಿ ನೆಲೆಸಿತ್ತು.

ರಮಾನಂದ ಮತ್ತು ಆರೋಪಿಯ ಇಬ್ಬರು ಮಕ್ಕಳು ಒಟ್ಟಾಗಿ ಆಟವಾಡುವಾಗ ಜಗಳವಾಗಿದೆ. ಆರೋಪಿಯ ಇಬ್ಬರು ಮಕ್ಕಳಿಗೆ ರಮಾನಂದ ಹಲ್ಲೆ ನಡೆಸಿದ್ದಾನೆ. ಇದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದಾಗ ರಮಾನಂದನ ತಾಯಿ ಬಾಯಿ ಜೋರು ಮಾಡಿದ್ದರಿಂದ ಚಂದೇಶ್ವರ್ ಕೋಪಗೊಂಡಿದ್ದ. ಅಷ್ಟಕ್ಕೆ ಸುಮ್ಮನಾಗದೆ, ಮೇ 6ರಂದು ರಮಾನಂದನನ್ನು ರಾಯಸಂದ್ರ ಕೆರೆ ಕೋಡಿ ಬಳಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ತಲೆ ಕೆಳಗೆ ಮಾಡಿ ಕೋಡಿ ಕೆಸರಲ್ಲಿ ಕಾಲಿನಿಂದ ಅದುಮಿ ಹೂತು ಹಾಕಿ ಮನೆಗೆ ಹಿಂದಿರುಗಿದ್ದ.

ಇತ್ತ ಮಗ ಕಾಣದೆ ನಾಥನ್ ಸಹಾನಿ ದಂಪತಿ ಎಲ್ಲೆಡೆ ಹುಡುಕಾಟ ನಡೆಸಿದಾಗ, ಎಲ್ಲಿಯೂ ಕಾಣಿಸಿರಲಿಲ್ಲ. ಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಪುತ್ರನನ್ನು ಚಂದೇಶ್ವರ್ ಕರೆದುಕೊಂಡು ಹೋಗುತ್ತಿದ್ದ ಎಂದು ಹೇಳಿದ್ದಾನೆ. ಗಾಬರಿಗೊಂಡು ಚಂದೇಶ್ವರ್ ಬಳಿ ಹೋಗಿ ಕೇಳಿದಾಗ ಏಕೆ ಗಲಾಟೆ ಮಾಡಿದೆ. ಅದಕ್ಕೆ ನಿಮ್ಮ ಮಗನನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ನೊಂದ ನಾಥನ್ ಸಹಾನಿ, ಪರಪ್ಪನ ಅಗ್ರಹಾರ ಠಾಣೆಗೆ ದೂರು ಸಲ್ಲಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ಕೆಸರಲ್ಲಿ ಹೂತಿದ್ದ ಬಾಲಕನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಸಾ.ರಾ. ಾತಿಮಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net