

ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭೂಮಿಯ ಆರೋಗ್ಯ ಕಾಪಾಡಲು ನರೇಗಾ ಮತ್ತು ಭದ್ರಾ ಕಾಡಾ ಸಹಯೋಗದಲ್ಲಿ ಸವಳು-ಜವಳು ಎಂಬ ಪೈಲಟ್ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.
ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ನೀರು ಬಳಕೆದಾರರ ಸಂಘಗಳ ಪದಾಧಿಕಾರಿಗಳಿಗೆ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಐತಿಹಾಸಿಕ ಕಾನೂನುಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ಶ್ರಮವೂ ಇದೆ ಎಂದರು.
ಭದ್ರಾ ಮತ್ತು ತುಂಗಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿವೆ. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರವು ತಾಂತ್ರಿಕ, ಸಹಕಾರ ಹಾಗೂ ರೈತ ಸಂಪರ್ಕ ಈ ಮೂರು ಹಂತದಲ್ಲಿ ಕೆಲಸ ಮಾಡುತ್ತಿದೆ. ನೀರು ಬಳಕೆದಾರರ ಸಂಘಗಳನ್ನು ಬಲವರ್ಧನೆ ಮಾಡಲಾಗುತ್ತಿದೆ. ಭದ್ರಾ ಕಾಡಾ ವ್ಯಾಪ್ತಿಯಲ್ಲಿ ಒಟ್ಟು 537 ಸಂಘಗಳಿದ್ದು 120 ಸಕ್ರಿಯವಾಗಿವೆ. ಕೊನೆಯ ಭಾಗದ ರೈತರಿಗೂ ನೀರು ತಲುಪಿಸುವ ಯೋಜನೆಯಿದ್ದು, ಸರ್ಕಾರ ರೈತಪರವಾಗಿ ಹೆಜ್ಜೆ ಇಡುತ್ತಿದೆ ಎಂದು
ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಂಘದ ಸದಸ್ಯರು, ರೈತರನ್ನು ಗುರುತಿಸಿದ್ದೇವೆ. ನಿರಂತರ ಅವರ ಸಂಪರ್ಕದಲ್ಲಿದ್ದೇವೆ. ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಘಗಳು ಸ್ವಾಯತ್ತ ಸಂಸ್ಥೆಗಳಂತೆ ಕೆಲಸ ಮಾಡುತ್ತಿವೆ. ಇವರಿಮದ ಸ್ಥಳೀಯವಾಗಿ ಅಹವಾಲು ಸ್ವೀಕರಿಸಲಾಗುತ್ತಿದೆ. ರೈತರು ಪ್ರಬಲವಾಗಿದ್ದರೆ ಮಾತ್ರ ಪ್ರಗತಿ ಸಾಧ್ಯ. ನೀರು ಸದ್ಬಳಕೆಯ ಅರಿವು ಮೂಡಿಸುವಲ್ಲಿ ಸಂಘಗಳ ಪಾತ್ರ ಮಹತ್ವದ್ದಾಗಿದೆ. ರೈತರು ಹಾಗೂ ಸಂಘದಿಂದ ಪ್ರಾಧಿಕಾರಕ್ಕೆ ನಿರಂತರ ಸಹಕಾರ ಲಭಿಸಿದೆ ಎಂದು ಹೇಳಿದರು.
ಭದ್ರಾ ಕಾಡಾ ಆಡಳಿತಾಧಿಕಾರಿ ಸತೀಶ್, ತಾಂತ್ರಿಕ ಅಧೀಕ್ಷಕ ಅಭಿಯಂತ ಪ್ರಶಾಂತ್, ಪ್ರಮುಖರಾದ ನಾಗೇಶ್ ಡೋಂಗ್ರೆ, ನಾಗಸುಲೋಚನಾ ಇತರರಿದ್ದರು. ಇದೇ ವೇಳೆ 10 ಸಹಕಾರ ಸಂಘಗಳಿಗೆ ಕೃಷಿ ಯಂತ್ರೋಪಕರಣ ವಿತರಿಸಲಾಯಿತು.