ನಾಪೋಕ್ಲು: ಪಟ್ಟಣ ಸೇರಿದಂತೆ ಚೆರಿಯಪರಂಬು, ಹಳೆತಾಲೂಕು, ಕೊಳಕೇರಿ, ಎಮ್ಮೆಮಾಡು, ಕೊಟ್ಟಮುಡಿ, ಕುಂಜಿಲ ವ್ಯಾಪ್ತಿಯ ಜುಮಾ ಮಸೀದಿಗಳಲ್ಲಿ ಈದ್ ಉಲ್ ಫಿತರ್ ಅನ್ನು ಮುಸಲ್ಮಾನರು ಬುಧವಾರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಖತೀಬರದ ಅಶ್ರಫ್ ಅಸ್ಸಾನಿ ನೇತೃತ್ವದಲ್ಲಿ ಸಾಮೂಹಿಕ ಈದ್ ಉಲ್ ಫಿತ್ರ್ ನಮಾಜ್ ನಿರ್ವಹಿಸಲಾಯಿತು.
ಪ್ರತಿಯೊಬ್ಬರೂ ಪ್ರವಾದಿಯವರ ಸಂದೇಶದಂತೆ ನಾಡಿನಲ್ಲಿ ಶಾಂತಿ, ಸೌಹಾರ್ದ ಮತ್ತು ಐಕ್ಯತೆಯಿಂದ ಜೀವನ ನಡೆಸಬೇಕು. ಇಸ್ಲಾಂ ಶಾಂತಿಯ ಧರ್ಮವಾಗಿದ್ದು, ಇನ್ನೊಬ್ಬರಿಗೆ ನೋವುಂಟು ಮಾಡುವ ಕಾರ್ಯ ಪ್ರವೃತ್ತಿಗಳನ್ನು ಮಾಡದೆ ಎಲ್ಲ ಧರ್ಮದವರೊಂದಿಗೆ ಸೌಹಾರ್ದತೆಯನ್ನು ಬೆಳೆಸಬೇಕು ಎಂದು ಸಂದೇಶ ನೀಡಿದರು.
ನಾಡಿನ ಸುಭಿಕ್ಷೆಗೆ ಹಾಗೂ ಮೃತಪಟ್ಟವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಜಮಾಯತ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಪಿ.ಎಂ. ಅರಫತ್, ಕಾರ್ಯದರ್ಶಿ ಯೂನಸ್ ಇತರರು ಇದ್ದರು.