

ಚೆನ್ನೈ: ವಿವಾಹಿತ ಮಹಿಳೆಗಿದ್ದ ಅಕ್ರಮ ಸಂಬಂಧಕ್ಕೆ ಮೂವರು ಬಲಿಯಾಗಿದ್ದಾರೆ. ಮದುವೆ ಆಗಿ ಗಂಡ ಇದ್ದರೂ ಈಕೆಗೆ ಪರಪುರುಷನೊಂದಿಗೆ ಸಂಬಂಧವಿತ್ತು. ವಿಪರ್ಯಾಸ ಅಂದ್ರೆ ಗಂಡ ಮತ್ತು ಪ್ರಿಯಕರ ಇಬ್ಬರೂ ಒಂದೇ ಊರಿನವರು.
ಗೋಪಿ, ಈತನ ಪತ್ನಿ ಕನ್ನಿಯಮ್ಮಾಳ್(38) ಮತ್ತು ಸುರೇಶ್ ಮೃತರು. ಆಟೋ ಚಾಲಕನಾಗಿದ್ದ ಸುರೇಶ್ಗೂ ಮದುವೆ ಆಗಿ ಮೂವರು ಹೆಣ್ಣುಮಕ್ಕಳು ಇದ್ದಾರೆ. ಆದರೂ ಈತ ಕನ್ನಿಯಮ್ಮಾಳ್ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇವರಿಬ್ಬರ ಸರಸ-ಸಲ್ಲಾಪ 5 ವರ್ಷದಿಂದ ನಡೆದಿತ್ತು. ಈ ವಿಚಾರ ಗೊತ್ತಾಗಿ ಕನ್ನಿಯಮ್ಮಾಳ್ ಜತೆ ಪತಿ ಗೋಪಿ ಹಲವು ಬಾರಿ ಗಲಾಟೆ ಮಾಡಿದ್ದ. ಅಷ್ಟೇ ಅಲ್ಲ, ನಡವಳಿಕೆ ಸರಿ ಮಾಡಿಕೋ ಎಂದು ತಿಳಿ ಹೇಳಿದ್ದ. ಆದರೂ ಅಕ್ರಮ ಸಂಬಂಧಕ್ಕೆ ಬ್ರೇಕ್ ಬಿದ್ದಿರಲಿಲ್ಲ.
ಇದೇ ವಿಚಾರವಾಗಿ ಗಂಡ ಮತ್ತು ಪ್ರಿಯಕರನ ನಡುವೆ ಕಳೆದ ಶುಕ್ರವಾರ ಗಲಾಟೆ ನಡೆದಿತ್ತು. ನಂತರ ಮನೆಗೆ ಬಂದ ಗೋಪಿ ಪತ್ನಿ ಜತೆ ವಾಗ್ವಾದ ನಡೆಸಿದ್ದ. ಮರುದಿನ ಬೆಳಗ್ಗೆ (ಶನಿವಾರ) ಇವರಿಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದವು. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಗೋಪಿ ಮತ್ತು ಸುರೇಶ್ ಇಬ್ಬರೂ ತಮಿಳುನಾಡಿನ ಚೆಂಗಲ್ಪಟ್ಟುವಿನ ಕೈಲಸಂಧರ್ ಸಮೀಪದ ನಿವಾಸಿಗಳು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಳಿಗೆ ಅಕ್ರಮ ಸಂಬಂಧ ಇದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆಕೆಯ ಪ್ರಿಯಕರನ ವಿಚಾರಣೆಗೆ ಮುಂದಾಗಿದ್ದರು. ಅತ್ತ ಪ್ರಿಯತಮೆ ಮತ್ತು ಆಕೆಯ ಗಂಡ ಸತ್ತ ಸುದ್ದಿ ಕೇಳಿ ಭಯಗೊಂಡ ಸುರೇಶ್, ತನ್ನ ಮನೆ ಬಾಗಿಲಿಗೆ ಪೊಲೀಸರು ಬಂದರೆ ಎನ್ನುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಸುರೇಶ್ನ ಪತ್ನಿ ಮತ್ತು ಮೂವರು ಮಕ್ಕಳು ಅನಾಥವಾಗಿವೆ.