ವಿಜಯಪುರದಲ್ಲಿ ಎಜುಕೇಷನ್ ಎಕ್ಸ್​ಪೋ: 2ನೇ ದಿನವೂ ವಿದ್ಯಾರ್ಥಿಗಳು-ಪಾಲಕರಿಂದ ಭಾರಿ ಸ್ಪಂದನೆ

education expo
Published on

ವಿಜಯಪುರ: ಅಪರೂಪದ ಮಾಹಿತಿ ಕಣಜ, ಮುಂದಿನ ಕಲಿಕೆಗೊಂದು ಕೈಗನ್ನಡಿ, ಸಿಟಿ ವಿದ್ಯಾರ್ಥಿಗಳು ಕಲಿಯುವ ಹೊಸ ಹೊಸ ಕೋರ್ಸ್‍ಗಳನ್ನು ಹಳ್ಳಿ ಮಕ್ಕಳಿಗೂ ಪರಿಚಯಿಸುವ ವಿನೂತನ ಪ್ರಯತ್ನ.... ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ ವತಿಯಿಂದ ಎಕ್ಸ್​ಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ವಿಜಯಪುರ ನಗರದ ವಿ.ಭ.ದರಬಾರ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎಜುಕೇಷನ್ ಎಕ್ಸ್​ಪೋ ಕಾರ್ಯಕ್ರಮದ 2ನೇ ದಿನವಾದ ಶನಿವಾರ ವಿದ್ಯಾರ್ಥಿಗಳಿಂದ ಕೇಳಿ ಬಂದ ಅಭಿಪ್ರಾಯಗಳಿವು.

ಎರಡನೇ ದಿನವೂ ನೂರಾರು ವಿದ್ಯಾರ್ಥಿಗಳು ಮತ್ತು ಪಾಲಕರು ಕಾರ್ಯಾಗಾರ- ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಧ್ಯೆ ಮಧ್ಯೆ ಶಿಕ್ಷಣ ಸಂಸ್ಥೆಗಳ ಸ್ಟಾಲ್‍ಗಳಿಗೆ ಭೇಟಿ ನೀಡಿ ತಾವು ಕಲಿಯಬಹುದಾದ ಕೋರ್ಸ್‍ಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು. ಬೆಳಗ್ಗೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಸರದಿಯಲ್ಲಿ ಬಂದ ಮಕ್ಕಳು ತಮ್ಮ ಹೆಸರು ನೋಂದಾಯಿಸಿ ಕಾರ್ಯಕ್ರಮದ ಮುಖ್ಯ ವೇದಿಕೆಯತ್ತ ಕಂಡು ಬಂತು.

ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ, ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮತ್ತಿತರ ಮುಖಂಡರು ಭೇಟಿ ನೀಡಿ ಎಕ್ಸ್​ಪೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಯುಸಿ ನಂತರ ಮುಂದೇನು ಎಂಬ ಕುರಿತು ಪ್ರೊ.ಸುಬ್ರಹ್ಮಣ್ಯ ಮಾತನಾಡಿ, ಹಲವು ಹೊಸ ಹೊಸ ಅವಕಾಶಗಳ ಬಗ್ಗೆ ತಿಳಿಸಿದರು. ನಗರದ ಆರ್​ಕೆಎಂ ಆಯುರ್ವೇದ ಮೆಡಿಕಲ್ ಕಾಲೇಜ್, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಸಂಶೋಧನೆ ಕೇಂದ್ರದ ಡಾ.ಮೃಣಾಲ್ ರುದ್ರಗೌಡರ ಮಾತನಾಡಿ, ನಮ್ಮ ಆಯ್ಕೆಗಳು ಮತ್ತು ನಮ್ಮ ಹವ್ಯಸಗಳ ನಡುವೆ ವ್ಯತ್ಯಾಸವಿದೆ. ನಮ್ಮ ಆಸಕ್ತಿ ನೋಡಿ ಭವಿಷ್ಯವನ್ನು ಆಯ್ದುಕೊಳ್ಳಬೇಕು. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹತ್ತಾರು ಅವಕಾಶಗಳ ಬಗ್ಗೆ ತಿಳಿಸಿದರು.

ಧಾರವಾಡದ ಗುರುದೇವ ಐಎಎಸ್, ಕೆಎಎಸ್ ಅಕಾಡಮಿಯ ಶಂಕರ ಹಚಿಚಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಸ್ತೃತ ಮಾಹಿತಿ ನೀಡಿದರು. ಧಾರವಾಡದ ಐಬಿಎಂಆರ್ ಬಿಬಿಎ ಕಾಲೇಜ್ ಪ್ರಾಚಾರ್ಯ ಪ್ರೊ.ಕಿಶನ್ ಪಾಟೀಲ ಮಾತನಾಡಿ, ಹೊಸ ಉದ್ಯಮ ಆರಂಭಿಸಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳು ಯಾವ ರೀತಿ ತಯಾರಿ ನಡೆಸಬೇಕು ಎಂಬ ಮಾಹಿತಿ ನೀಡಿದರು. ಸಂಜೆ ಕಲಾವಿದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಸಂಜೆವರೆಗೆ ಎಕ್ಸ್​ಪೋಗೆ ಭೇಟಿ ನೀಡಿ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net