ಶಿಕ್ಷಕರ ನೇಮಕಾತಿ ಹಗರಣ: ಮತ್ತೊಬ್ಬ ಶಾಸಕ ಬಂಧನ, ದೀದಿ ಸರ್ಕಾರಕ್ಕೆ ಶಾಕ್​ ಕೊಟ್ಟ ಇಡಿ

West Bengal teachers recruitment scam
Published on

ಕೋಲ್ಕತ್ತಾ: ಪಶ್ಚಿಮ ಬಂಗಳಾದಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿಯಲ್ಲಿನ ಹಗರಣ ಪ್ರಕರಣದಲ್ಲಿ ಮತ್ತೊಬ್ಬ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಮಂಗಳವಾರ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬಂಧಿಸಿದ್ದಾರೆ.

ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಇದೇ ಪ್ರಕರಣದಲ್ಲಿ ಸಿಲುಕಿರುವ ಆಗಿನ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನ 2 ತಿಂಗಳ ಹಿಂದೆಯೇ ಇಡಿ ಬಂಧಿಸಿದೆ. ಬಂಧನಕ್ಕೊಳಪಟ್ಟ ವೇಳೆ ಪಾರ್ಥ ಚಟರ್ಜಿ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು.

ಪ್ರಮುಖ ಆರೋಪಿ ಪಾರ್ಥ ಚಟರ್ಜಿ ಮತ್ತು ಇವರ ಆಪ್ತೆ ಮನೆ ಸೇರಿ ಹಲವೆಡೆ ಕಳೆದ ಜುಲೈ 22ರಂದು ಇಡಿ ದಾಳಿ ಮಾಡಿತ್ತು. ಆಗ ಪಾರ್ಥ ಚಟರ್ಜಿಯ ಆಪ್ತೆ ಅರ್ಪಿತಾ ಮುಖರ್ಜಿಯ ಮನೆಯಲ್ಲಿ 20 ಕೋಟಿ ನಗದು ಪತ್ತೆಯಾಗಿದ್ದು, ಭಾರೀ ಸುದ್ದಿಯಾಗಿತ್ತು. ಅದೇ ದಿನ ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಪಳಶಿಪಾರ ವಿಧಾನಸಭಾ ಕ್ಷೇತ್ರದ ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ದಾಳಿಯಾಗಿತ್ತು.

ಪಾರ್ಥ ಚಟರ್ಜಿ ಮತ್ತು ಆಪ್ತೆ ಅರ್ಪಿತಾಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಬಂಧನಕ್ಕೊಳಪಟ್ಟ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನದಿಂದ ಸಿಎಂ ಮಮತಾ ಬ್ಯಾನರ್ಜಿ ವಜಾ ಮಾಡಿದ್ದರು. ಪ್ರಾಥಮಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷರೂ ಆದ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಮತ್ತೆ ನಿನ್ನೆ(ಸೋಮವಾರ) ರಾತ್ರಿ ಇಡಿ ವಿಚಾರಣೆಗೆ ಒಳಪಡಿಸಿತ್ತು, ಬೆಳಗ್ಗೆ ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net