'ವಿಜಯಾನಂದ' ಸಿನಿಮಾದ ಮತ್ತೊಂದು ಟೀಸರ್​ ಬಿಡುಗಡೆ: ಇದು ಅನಂತ್​ ನಾಗ್​ ಬರ್ತ್​ ಡೇ ಸ್ಪೆಷಲ್​

1161604
Published on

ಬೆಂಗಳೂರು: ವಿಆರ್​ಎಲ್ ಫಿಲಂ ಪ್ರೊಡಕ್ಷನ್​ನ ಮೊದಲ ಬಹುನಿರೀಕ್ಷಿತ ಚಿತ್ರ “ವಿಜಯಾನಂದ” ಬಯೋಪಿಕ್​ ಸಿನಿಮಾದ ಮತ್ತೊಂದು ಟೀಸರ್ ಇಂದು(ಸೆ.4) ಬಿಡುಗಡೆಯಾಗಿದೆ. ಇದು ಚಂದನವನದ ಹಿರಿಯ ನಟ ಅನಂತ್​ ನಾಗ್​ ಅವರ ಬರ್ತ್​ಡೇ ಸ್ಪೆಷಲ್​.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಪುರಸ್ಕ್ರತ ಡಾ. ವಿಜಯ ಸಂಕೇಶ್ವರ ಅವರ ಜೀವನ ತೆರೆಮೇಲೆ ಮೂಡಿಬರಲಿದೆ. ಈ ಸಿನಿಮಾದಲ್ಲಿ ಡಾ. ವಿಜಯ ಸಂಕೇಶ್ವರ ಅವರ ತಂದೆಯಾಗಿ ಅನಂತ್​ ನಾಗ್​ ಬಣ್ಣಹಚ್ಚಿದ್ದಾರೆ. ಡಾ. ವಿಜಯ ಸಂಕೇಶ್ವರ ಅವರ ಹುಟ್ಟುಹಬ್ಬದ ಪ್ರಯುಕ್ತ ಆಗಸ್ಟ್ 2 ರಂದು ರಿಲೀಸ್​ ಆದ ‘ವಿಜಯಾನಂದ’ ಚಿತ್ರದ ಫಸ್ಟ್​ಲುಕ್​ ನಾಡಿನಾದ್ಯಂತ ಮೆಚ್ಚುಗೆ ಪಡೆದಿತ್ತು. ಆಗಸ್ಟ್​ 12ರಂದು ಚಿತ್ರದ ಮೋಷನ್ ಪೋಸ್ಟರ್ ಟೀಸರ್ ಬಿಡುಗಡೆಯಾಗಿ, ಮತ್ತಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಅನಂತ್​ ನಾಗ್​ ಅವರ ಜನ್ಮದಿನದ(ಸೆ.4) ಸ್ಪೆಷಲ್​ ಮತ್ತೊಂದು ಟೀಸರ್​ ರಿಲೀಸ್​ ಆಗಿದೆ.

1976ರಲ್ಲಿ ಕೇವಲ ಒಂದು ಟ್ರಕ್​ನಿಂದ ಆರಂಭವಾದ ವಿಜಯ ಸಂಕೇಶ್ವರ ಅವರ ‘ವಿಆರ್​ಎಲ್’ ಪ್ರಯಾಣ, ಇದೀಗ ಭಾರತದಲ್ಲಿಯೇ ಅತಿ ದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಎಲ್ಲ ಸಾಧನೆಯ ಹಿಂದಿನ ರೋಚಕ ಕಥೆಯನ್ನು ಕಮರ್ಷಿಯಲ್ ಕೋನದಲ್ಲಿ ಬಯೋಪಿಕ್ ಮಾಡುವ ಕಾರ್ಯ ನಡೆಯುತ್ತಿದೆ. ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮತ್ತು ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ‘ವಿಜಯಾನಂದ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ನಂ1 ದಿನಪತ್ರಿಕೆ ‘ವಿಜಯವಾಣಿ’ ಮತ್ತು ಜನಪ್ರಿಯ ಸುದ್ದಿವಾಹಿನಿ ‘ದಿಗ್ವಿಜಯ’ ಮೂಲಕ ಮಾಧ್ಯಮ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಆನಂದ ಸಂಕೇಶ್ವರ ಅವರು ಚಿತ್ರ ನಿರ್ಮಾಣದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net