

ಬೆಂಗಳೂರು: ಧೈರ್ಯ ಇದ್ರೆ ಟಚ್ ಮಾಡ್ಲಿ... ಹೋಂ ಮಿನಿಸ್ಟರ್ರ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ಜೈಲಿಗೆ ಹೋಗಲೂ ಸಿದ್ಧನಿದ್ದೇನೆ. ನನ್ನ ಹೋರಾಟ ನಿಲ್ಲಿಸುವ ಶಕ್ತಿ ಹೋಂ ಮಿನಿಸ್ಟರ್ಗಿಲ್ಲ. ನಮ್ಮ ಪಾದಯಾತ್ರೆ ನಡೆದೇ ನಡೆಯುತ್ತೆ... ಇದನ್ನು ತಡೆಯೋಕೆ ಹೋಂ ಮಿನಿಸ್ಟರ್ ಇನ್ನೊಂದು ಜನ್ಮದಲ್ಲಿ ಹುಟ್ಟಿ ಬರ್ಬೇಕು... ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗ ಸವಾಲು ಹಾಕಿದ್ದಾರೆ.
ಡಿಕೆಶಿ ನೇತೃತ್ವದಲ್ಲಿ ಜ.9ರಿಂದ ನಡೆಯಲಿರುವ ಮೇಕೆದಾಟು ಪಾದಯಾತ್ರೆಗೆ ಕರೊನಾ ರೂಲ್ಸ್ನ ಕರಿನೆರಳು ಬಿದ್ದಿದೆ. ಇದೆಲ್ಲೂ ಪಾದಯಾತ್ರೆ ತಡೆಯಲು ರಾಜ್ಯ ಸರ್ಕಾರ ಮಾಡಿರುವ ಹುನ್ನಾರ ಎಂದು ಟೀಕಿಸಿರುವ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರೂ ಪಾದಯಾತ್ರೆ ಮಾಡಿಯೇ ತೀರುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಗೃಹ ಸಚಿವ ಅರಗ ಜ್ಞಾನೇಂದ್ರ, ಪಾಸಿವಿಟಿ ಕೇಸ್ ಹೆಚ್ಚಾದರೆ ಕ್ರಮ ಅನಿವಾರ್ಯ. ಪ್ರತಿಯೊಬ್ಬರೂ ಕಡ್ಡಾಯವಾಗಿ ರೂಲ್ಸ್ ಫಾಲೋ ಮಾಡ್ಲೇ ಬೇಕು ಎಂದಿದ್ದಾರೆ. ಗರಂ ಆಗಿರುವ ಡಿಕೆಶಿ, ಹೋಂ ಮಿನಿಸ್ಟರ್ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ನಾನು ನಲವತ್ತು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ಗುರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ನಾವು ಪಾದಯಾತ್ರೆ ಮಾಡುತ್ತೇವೆ. ನಮ್ಮ ಯಾತ್ರೆ ನ್ಯಾಷನಲ್ ಕಾಲೇಜ್ ಗ್ರೌಂಡ್ ತಲುಪುತ್ತೆ. ಸಭೆ, ಸಮಾರಂಭಕ್ಕೆ ಅವಕಾಶ ಇಲ್ಲ ಅಂದವರು ಯಾಕೆ ವಿಧಾನಸೌಧದ ಕ್ಯಾಬಿನೆಟ್ ಸಭೆಯಲ್ಲಿ ಕರೊನಾ ರೂಲ್ಸ್ ಯಾಕೆ ಬ್ರೇಕ್ ಮಾಡಿದ್ರು. ರಾಜಕಾರಣಿಗಳ ಬೆಂಬಲಿಗರ ಅವಶ್ಯಕತೆ ಅಲ್ಲಿ ಏನಿತ್ತು? ಈ ಸಭೆಯಲ್ಲಿ ಯಾಕೆ ಇಷ್ಟು ಜನ ಸೇರಿಸಿದ್ರು ಎಂದು ಡಿಕೆಶಿ ಅಸಮಾಧಾನ ಹೊರ ಹಾಕಿದ್ದಾರೆ.