ಮೂರು ದಿನ ಮೌನ ಎಂದಿದ್ದೆ, ವಿಧಿಯಿಲ್ಲದೆ ಮೌನ ಮುರಿಯುತ್ತಿರುವೆ ಎನ್ನುತ್ತಲೇ ಹಲವು ವಿಚಾರ ಬಿಚ್ಚಿಟ್ಟ ಡಿಕೆಶಿ

Mekedatu 1
Published on

ಬೆಂಗಳೂರು: ಕಾಂಗ್ರೆಸ್​ನ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆ ನಾಲ್ಕು ದಿನ ಪೂರೈಸಿ, 5ನೇ ದಿನವಾದ ಇಂದು(ಗುರುವಾರ) ಮೊಟಕುಗೊಂಡಿದೆ. ಎರಡು ದಿನದಿಂದ ಮೌನಕ್ಕೆ ಜಾರಿದ್ದ ಡಿಕೆಶಿ, ಇದೀಗ ಮೌನ ಮುರಿದು ಹಲವು ವಿಚಾರಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ನಾನು ಮೂರು ದಿನ ಮೌನ ಎಂದಿದ್ದೆ. ಆದರೆ, ಅನಿವಾರ್ಯವಾಗಿ ಮೌನ ಮುರಿಯುತ್ತಿದ್ದೇನೆ. ನಾನು ರಾತ್ರಿ ಮಲಗಿದ್ದ ವೇಳೆ ಮನೆಗೆ ಕರೊನಾ ಸೋಂಕಿತ ಜಿಲ್ಲಾಧಿಕಾರಿಯ ಸಹಿಯುಳ್ಳ ನೋಟಿಸ್​ ನೀಡಲು ಎಸಿ ಮತ್ತು ಡಿವೈಎಸ್​ಪಿ ಬಂದಿದ್ದರು. ಡಿಸಿಗೆ ಕೋವಿಡ್ ಇದ್ದ ಕಾರಣ ಎಸಿ ಮತ್ತು ಡಿವೈಎಸ್​ಪಿ ಅವರನ್ನು ವಾಪಸ್​ ಕಳುಹಿಸಿದ್ದೆ. ಮನೆ ಬಾಗಿಲಿಗೆ ನೋಟಿಸ್​ ಅಂಟಿಸಿ ಹೋಗಿದ್ದರಂತೆ. ಬೆಳಗ್ಗೆ ಅವರೇ ಹರಿದು ಬಿಸಾಕಿದ್ದರು. ಪಾದಯಾತ್ರೆ ನಿಲ್ಲಿಸಿ ಎಂದು ನೋಟಿಸ್​ನಲ್ಲಿ ತಿಳಿಸಿದ್ದರಂತೆ.‌ ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನೋಟಿಸ್ ನೀಡಿ, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಆಂಬುಲೆನ್ಸ್​ ನಿಯೋಜಿಸಿ ಎಂದು ಹೇಳಿದ್ದಾರೆ. ಸರ್ಕಾರದವರಿಗೂ ನಾವು ನಡೆಯಬೇಕು ಎಂಬುದೇ ಆಸೆ. ಸರ್ಕಾರ ನಮ್ಮ ಬಳಿ ಒಂದು, ಮಾಧ್ಯಮಗಳ ಬಳಿ ಇನ್ನೊಂದು ಹೇಳಿಕೆ ನೀಡುತ್ತಿತ್ತು ಎಂದು ಡಿಕೆಶಿ ಹೇಳಿದರು.

ನ್ಯಾಯಾಲಯ ಈವರೆಗೂ ಪಾದಯಾತ್ರೆ ನಿಲ್ಲಿಸಿ ಎಂದು ನಮಗೆ ಹೇಳಿಲ್ಲ‌. ಆದರೂ, ಇಂದಿನ ಪರಿಸ್ಥಿತಿ ಅವಲೋಕಿಸಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದೇವೆ. ನ್ಯಾಯಾಲಯಕ್ಕೆ ಗೌರವ ನೀಡುವುದು, ನಮ್ಮ ದೇವರಾದ ಜನರಿಗೆ ನಾವು ತಪ್ಪಿತಸ್ಥರಾಗಬಾರದು ಎಂಬ ಉದ್ದೇಶ ನಮ್ಮದು. ಕೊನೆಗೆ ನಾವು ಇಬ್ಬರೇ ನಡೆಯಬೇಕು ಎಂದುಕೊಂಡಿದ್ದೆವು‌. ಆದರೆ, ಜನರು ಸುತ್ತ ಸುತ್ತಿಕೊಳ್ಳುತ್ತಾರೆ ಎಂಬ ಭಯ ಅಷ್ಟೆ. ನಾವು ಕೊರ್ಟು, ಜೈಲು, ಬೇಲು ಇಂತಹವಕ್ಕೆಲ್ಲ ಹೆದರಿಕೊಳ್ಳುವುದಿಲ್ಲ. ಬಿಬಿಎಂಪಿ ಕೂಡ ಇಂದು ಬೆಳಗ್ಗೆ ನೋಟಿಸ್ ನೀಡಿ ಅನುಮತಿ ನಿರಾಕರಿಸಿದೆ. ಈ ಯಾತ್ರೆ ಇಲ್ಲಿಗೆ ಮುಕ್ತಾಯ ಎನ್ನುವಂತಿಲ್ಲ. ಮತ್ತೆ ಇಲ್ಲಿಂದಲೇ ಯಾತ್ರೆ ಮುಂದುವರಿಯಲಿದೆ. ಎಲ್ಲರನ್ನೂ ‌ಒಂದೇ ರೀತಿ ಕಾಣುವ ಗುಣ ಸರ್ಕಾರಕ್ಕಿದ್ದರೆ ಅವರ ಶಾಸಕರು, ಅಧಿಕಾರಿಗಳ ಮೇಲೂ ಕೇಸ್ ಹಾಕಬೇಕಿತ್ತು. ಪ್ರಚೋದನಕಾರಿ‌ ಹೇಳಿಕೆ ನೀಡಿದ್ದವರ ಮೇಲೆ ಇಂದಾದರೂ‌ ಕೇಸ್ ಹಾಕಿ, ಸರ್ಕಾರ ಧೈರ್ಯ ಪ್ರದರ್ಶಿಸಬೇಕು ಎಂದು ಡಿಕೆಶಿ ಮಾತಿನಲ್ಲೇ ಚಿವುಟಿದರು.

ಕೋವಿಡ್ ಸಮಯದಲ್ಲಿ ಜನರೊಟ್ಟಿಗೆ ನಿಂತಿದ್ದೇವೆ. ಸಾವಿರಕ್ಕೂ ಹೆಚ್ಚು ಆಂಬುಲೆನ್ಸ್ ಅನ್ನು ಸಾರ್ವಜನಿಕರ ಸೇವೆಗೆ ಮೀಸಲಿಟ್ಟಿದ್ದೆವು. ಈ ಸೇವೆ ಮುಂದುವರಿಯಲಿದೆ. ನಮ್ಮ ಹೋರಾಟ ತಾತ್ಕಾಲಿಕ ಸ್ಥಗಿತ ಅಷ್ಟೆ. ಸಾವಿರಾರು ಜನ ನಮಗೆ ಪ್ರೀತಿ ತೋರಿಸಿದ್ದಾರೆ. ಅವರ ಋಣ ಹೇಗೆ ತೀರಿಸಬೇಕು‌ ಎಂದು ಗೊತ್ತಾಗುತ್ತಿಲ್ಲ. ಮೊದಲು ತಮಿಳುನಾಡಿನ ಮೇಲೆ ಹೋರಾಟ ಮಾಡುತ್ತಿದ್ದೆವು.‌ ಈಗ ತಮಿಳುನಾಡಿನೊಂದಿಗೆ ರಾಜ್ಯದ ಇನ್ನೆರೆಡು ಪಾರ್ಟಿ ವಿರುದ್ಧವೂ ಹೋರಾಟ ಮಾಡಬೇಕು ಎಂದು ಪರೋಕ್ಷವಾಗಿ ಬಿಜೆಪಿ ಮತ್ತು ಜೆಡಿಎಸ್​ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net