

ಮಹದೇವಪುರ: ಬೆಂಗಳೂರಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಮಹದೇವಪುರ ಕ್ಷೇತ್ರದಲ್ಲಿ ಇದೀಗ ಅತಿ ಹೆಚ್ಚು ರಸ್ತೆ ಗುಂಡಿ ಬಿದ್ದಿರುವ ಕ್ಷೇತ್ರ ಎಂಬ ಅಪಖ್ಯಾತಿ ಗಳಿಸಿದ್ದು,ಆದಷ್ಟು ಬೇಗನೆ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ರಸ್ತೆಗುಂಡಿ ಮುಚ್ಚಬೇಕು ಎಂದು ಕಾಂಗ್ರೆಸ್ ಮುಖಂಡ ಕುಪ್ಪಿ ಮಂಜುನಾಥ್ ಒತ್ತಾಯಿಸಿದ್ದಾರೆ.
ರಸ್ತೆ ಗುಂಡಿ ಮುಚ್ಚದೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ವರ್ತೂರು ಗ್ರಾಮದ ಸ್ಥಳಿಯ ಕಾಂಗ್ರೆಸ್ ಮುಖಂಡ ಕುಪ್ಪಿ ಮಂಜುನಾಥ್ ನೇತೃತ್ವದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿ ವಾಹನ ಸವಾರರಿಗೆ ಯಾವುದೆ ತೊಂದರೆ ಆಗದಿರಲೆಂದು ’ರಸ್ತೆಗುಂಡಿಗೆ ಬೂದಗುಂಬಳಕಾಯಿ ಒಡೆದು ಪೂಜೆ ಸಲ್ಲಿಸಿ ಮಾತನಾಡಿದರು.
ಬೆಂಗಳೂರು ನಗದಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಸಂಗ್ರಹವಾಗುವುದು ಮಹದೇವಪುರ ಕ್ಷೇತ್ರದಲ್ಲಿ, ಆದರೆ,ಮಹದೇವಪುರ ಕ್ಷೇತ್ರದ ವರ್ತೂರು, ಬಳಗೆರೆ, ಗುಂಜೂರು ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ. ಪ್ರತಿನಿತ್ಯ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಿದ್ದು, ಇದಕ್ಕೆ ಶಾಸಕರ ಹಾಗೂ ಅಧಿಕಾರಿಗಳ ವೈಫಲ್ಯ ನೇರ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 15 ವರ್ಷದಿಂದ ಮಾಜಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಈಗ ಎರಡು ವರ್ಷಗಳಿಂದ ಶಾಸಕಿ ಮಂಜುಳಾ ಲಿಂಬಾವಳಿ ಅಧಿಕಾರ ನಡೆಸುತ್ತಿದ್ದಾರೆ. 17 ವರ್ಷದಿಂದ ಸುಮಾರು 8 ಸಾವಿರಕ್ಕು ಹೆಚ್ಚು ಕೋಟಿ ಅನುಧಾನ ಬಂದಿದೆ, ಆದರೆ,ಕ್ಷೇತ್ರದ ಅಭಿವೃದ್ಧಿ ಮಾತ್ರ ಕಳಪೆಯಾಗಿದೆ ಎಂದು ಆರೋಪಿಸಿದರು. ಈಗ ಸರ್ಕಾರದಿಂದ ಗುಂಡಿ ಮುಚ್ಚಲು ಅನುಧಾನ ಬಿಡುಗಡೆ ಮಾಡಿದ್ದಾರೆ ಆದರೆ, ಸಾರ್ವಜನಿಕರು ಹೆಚ್ಚಾಗಿ ಓಡಾಡುವ ರಸ್ತೆಗಳನ್ನು ಮುಚ್ಚದೆ ಮೊದಲು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಅನುಕೂಲವಾಗುವ ಹಾಗೆ ರಸ್ತೆ ಡಾಂಬರು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರು ಹೆಚ್ಚಾಗಿ ಓಡಾಡುವ ವರ್ತೂರು, ಗುಂಜೂರು, ಬಳಗೆರೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರಿಗೆ ತೊಂದರೆಯಾಗಬಾರದು ಹಾಗೂ ಬೇಗ ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಬೂದಕುಂಬಳಕಾಯಿ ಇರಿಸಿ ಪೂಜೆ ಸಲ್ಲಿಸುತ್ತಿದ್ದೇವೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಾರಾಯಣಸ್ವಾಮಿ, ಕೃಷ್ಣಪ್ಪ, ಸುಬ್ಬಣ್ಣ, ಮತ್ತಿತರರಿದ್ದರು.