

ಶಿವಮೊಗ್ಗ: ಒಬ್ಬ ಪ್ರಧಾನಿ, ಒಂದು ಸರ್ಕಾರ, ಒಂದು ಪಕ್ಷದಿಂದ ವಿಕಸಿನ ಭಾರತ ನಿರ್ಮಾಣ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿದಾಗ ಅದು ಸಾಕಾರಗೊಳ್ಳಲಿದೆ ಎಂದು ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ಭಾರತೀಯ ಮಜ್ದೂರು ಸಂಘ(ಬಿಎಂಎಸ್)ಕರ್ನಾಟಕ ಶಾಖೆಯ 70ನೇ ವರ್ಷಾಚರಣೆ ಸಮಾರೋಪ ಮತ್ತು ರಾಷ್ಟ್ರೀಯ ಕಾರ್ಮಿಕ ದಿನದ ನಿಮಿತ್ತ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಮುಖವಾಗಿ ಕಾರ್ಮಿಕರು ವಿಕಸಿತ ಭಾರತದ ಜತೆಗಾರರು. ಅದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಒಪ್ಪಿಕೊಂಡಿದ್ದಾರೆ ಎಂದರು.
ಭಾರತೀಯರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳುವುದಕ್ಕೆ ಬ್ರಿಟಿಷರು 28 ಕಾಯ್ದೆಗಳನ್ನು ಮಾಡಿಕೊಂಡಿದ್ದರು. ಆ ಎಲ್ಲ ಕಾಯ್ದೆಗಳನ್ನೂ ಒಟ್ಟುಗೂಡಿಸಿ ಕೇಂದ್ರ ಸರ್ಕಾರ ನಾಲ್ಕು ಕೋಚ್‌ಗಳನ್ನಾಗಿ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರಕ್ಕೆ ಯಾವ ರಾಜ್ಯದ ಜತೆಗೂ ಸಂಘರ್ಷದ ಅವಶ್ಯಕತೆ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಹಮತದಿಂದ ಹೋಗಬೇಕಿದೆ. ಬಿಜೆಪಿಯ ಸಂಸದರು, ಶಾಸಕರು ಇಲ್ಲದ ರಾಜ್ಯಗಳಿಗೂ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಇಲ್ಲಿ ಕುಟುಂಬ ಎಂದರೆ ಬರೀ ಗಂಡ-ಹೆಂಡತಿ, ಸಂಚಾರವಲ್ಲ. ವೈಚಾರಿಕ ನೆಲೆಗಟ್ಟಿನಲ್ಲಿ ದೇಶದ ಅಭಿವೃದ್ಧಿ ಮಾಡುವ ಪರಿಕಲ್ಪನೆಯೇ ಕುಟುಂಬವಾಗಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ದಕ್ಷಿಣ ಮತ್ತು ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಲ್.ವಿಶ್ವನಾಥ ಪ್ರಾಸ್ತಾವಿಕ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಎನ್.ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ದಕ್ಷಿಣ ಮತ್ತು ದಕ್ಷಿಣ ಮಧ್ಯಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದುರೈರಾಜ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉಪಸ್ಥಿತರಿದ್ದರು.