

ಬೆಂಗಳೂರು: ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಲು (A designation of compassion; No discrimination for SC, ST candidates) ಸರ್ಕಾರ ರಾಜ್ಯಪತ್ರ ಪ್ರಕಟಿಸಿದೆ.
ಕೆಲವು ಇಲಾಖೆಗಳಲ್ಲಿ ಎಸ್ಸಿ,ಎಸ್ಟಿ ಗೆ ಸೇರಿದ ಅಭ್ಯರ್ಥಿಗಳ ವಿದ್ಯಾರ್ಹತೆ ಪರಿಗಣಿಸದೆ ಕೆಳಹಂತದ ಹುದ್ದೆಗಳಿಗೆ ನೇಮಕ ಮಾಡಿರುವ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ಆತನ ಅವಲಂಬಿತರಲ್ಲಿ ಒಬ್ಬರಿಗೆ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರನ್ವಯ ಅರ್ಹತೆಯ ಆಧಾರದ ಮೇಲೆ ಅನುಕಂಪದ ಆಧಾರದ ಮೇಲೆ ಕರ್ನಾಟಕ ಸರ್ಕಾರ ಸಚಿವಾಲಯದ ಸಹಾಯಕ ಹುದ್ದೆಯ ವೇತನ ಶ್ರೇಣಿಯನ್ನು ಮೀರದಂತಹ ಗರಿಷ್ಠ ಗ್ರೂಪ್ ಸಿ ಹುದ್ದೆ ಅಥವಾ ಗ್ರೂಪ್ ಡಿ ಹುದ್ದೆಯನ್ನು ನೀಡಬಹುದಾಗಿದೆ.
ಅನುಕಂಪದ ಆಧಾರದ ಮೇಲಿನ ನೇಮಕಾತಿ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ಕಾಲಮಿತಿಯೊಳಗೆ ಅಭ್ಯರ್ಥಿಯು ಹೊಂದಿರುವ ವಿದ್ಯಾರ್ಹತೆಯನ್ನು ಪರಿಗಣಿಸಿ ನೇಮಕಾತಿ ನೀಡಬೇಕಾಗುತ್ತದೆ. ಆದರೆ, ಕಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕ ಸೇರಿದ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಅವರುಗಳ ವಿದ್ಯಾರ್ಹತೆಯನ್ನು ಪರಿಗಣಿಸದೇ ಕೆಳಹಂತದ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಬಗ್ಗೆ ದೂರುಗಳು ಸ್ವೀಕೃತವಾಗಿದ್ದು, ಈ ನಡೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಎಸ್ಸಿ, ಎಸ್ಟಿ ಸೇರಿದಂತೆ ಇತರೆ ಜಾತಿ/ಧರ್ಮ/ವರ್ಗದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡದಂತೆ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸುವಂತೆ ಹಾಗೂ ಈ ರೀತಿ ನಿಯಮಾನುಸಾರ ಕ್ರಮವಹಿಸದ ಅಧಿಕಾರಿ/ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಎಲ್ಲಾ ಸಕ್ಷಮ/ನೇಮಕಾತಿ ಪ್ರಾಧಿಕಾರಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಚ್ಚರಿಸಿದೆ.