

ಹುಣಸೂರು: ಅರಣ್ಯ ಇಲಾಖೆಯ ಆಗು-ಹೋಗು, ಸಮಸ್ಯೆ ಮತ್ತು ಸಂಶೋಧನೆಗಳ ಕುರಿತು ಮಾಧ್ಯಮ ಮತ್ತು ಸಾರ್ವಜನಿಕರಿಗೆ ತಿಳಿಸುವ ಕಾರ್ಯದಲ್ಲಿ ಇಲಾಖೆ ಎಡುವುತ್ತಿದ್ದರೆ, ಪ್ರಸ್ತುತ ಮಾಧ್ಯಮ ಕೂಡ ಘಟನೆಯೊಂದರ ಸತ್ಯಾನ್ವೇಷಣೆಯಿಂದ ದೂರಾಗಿರುತ್ತಿತ್ತು ಎಂದು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಕವಿತಾ ರೈ ಅಭಿಪ್ರಾಯಪಟ್ಟರು.
69ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಭಾನುವಾರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಾಗರಹೊಳೆ ವಲಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ವನ್ಯಜೀವಿ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣದಲ್ಲಿ ಮಾಧ್ಯಮದ ಪಾತ್ರ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ಮಾಧ್ಯಮ ಪ್ರಮುಖ ಕಾರಣವಾಗಿದೆ. ಘಟನೆಯೊಂದಕ್ಕೆ ವಿವಿಧ ಆಯಾಮಗಳನ್ನು ಕಟ್ಟಿಕೊಟ್ಟು ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವಂತೆ ಮಾಡುವ ಮಾಧ್ಯಮ ವರದಿಗಳು ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿವೆ ಎಂದರು.
ನಿಸರ್ಗವನ್ನು ಮಾನವ ಅತಿಯಾದ ಭೂ ಆಕ್ರಮಣದೊಂದಿಗೆ ವ್ಯಾಪಿಸುತ್ತಿದ್ದಾನೆ. ಇದನ್ನು ಸಮತೋಲನಗೊಳಿಸಲು ಇಲಾಖೆ ಮತ್ತು ನಾಗರಿಕರ ಸಹಯೋಗದಿಂದ ಮಾತ್ರ ಸಾಧ್ಯ. ಕಾಡಿನಿಂದ ಹೊರದಬ್ಬಿಸಿಕೊಂಡಿರುವ ಆದಿವಾಸಿಗಳಿಗೆ ಇಲಾಖೆ ಎಲ್ಲ ಸೌಲಭ್ಯ ನೀಡಬಹುದು. ಆದರೆ ಆದಿವಾಸಿಗಳ ಬದುಕಿನ ಸಂಸ್ಕೃತಿಯನ್ನು ನೀಡಲು ಸಾಧ್ಯವಿಲ್ಲ. ಸಂಸ್ಕೃತಿಗೆ ಪರ್ಯಾಯವನ್ನೂ ನೀಡಲು ಸಾಧ್ಯವಿಲ್ಲ. ಮಾಧ್ಯಮ ಇಂತಹ ವಿಚಾರಗಳನ್ನು ಪದೇ ಪದೆ ಪ್ರಕಟಿಸಬೇಕು. ಅರಣ್ಯ ಇಲಾಖೆ ತನ್ನ ಇಲಾಖೆ ಕುರಿತಾಗಿನ ಮಾಹಿತಿ, ನೂತನ ಸಂಶೋಧನೆಗಳು ಮತ್ತು ಪ್ರವಾಸೋದ್ಯಮದ ಕುರಿತಾಗಿ ಮುಕ್ತ ಮಾಹಿತಿ ನೀಡಿದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದರು.
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊ.ತೇಜಸ್ವಿ ನವಿಲೂರು. ‘ಮಾಧ್ಯಮದ ಇಂದಿನ ಸ್ಥಿತಿಗತಿ’ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ.ದೀಪಕ್, ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಶೆರಿನ್‌ಮುತ್ತಣ್ಣ, ಪತ್ರಕರ್ತ ಎಚ್.ಕೆ.ಜಗದೀಶ್ ಮಾತನಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ನಿರ್ದೇಶಕ ದಾ.ರಾ.ಮಹೇಶ್, ಎಚ್.ಡಿ.ಕೋಟೆ-ಸರಗೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ, ಹುಣಸೂರು ತಾಲೂಕು ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಹುಲ್ಲಹಳ್ಳಿ ಮೋಹನ್, ಸಾಲಿಗ್ರಾಮ ಯಶ್ವಂತ್, ದಾಸೇಗೌಡ ಇತರರಿದ್ದರು.