ಸೋಲು-ಗೆಲುವಿನದೇ ಚರ್ಚೆ

congress jds
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಅಭ್ಯರ್ಥಿಗಳ ಸೋಲು&ಗೆಲುವಿಗೆ ಕಾರಣಗಳು ಏನು ಎಂಬುದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳು ರಾಜ್ಯ, ರಾಷ್ಟ್ರದ ಗಮನಸೆಳೆದಿತ್ತು. ಆಗಿನಿಂದಲೇ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರಗಳ ಬಗ್ಗೆ ಚರ್ಚೆಗಳು ಶುರುವಾಗಿದ್ದವು.

ಈ ಬಾರಿ ಗ್ರಾಮೀಣ ಭಾಗದಲ್ಲಿ ಚುನಾವಣೆಯ ಕಾವು ಜೋರಾಗಿಯೇ ಇತ್ತು. ಜೆಡಿಎಸ್​ ಬಿಜೆಪಿಯೊಂದಿಗೆ ಮೈತ್ರಿಯಾಗಿದ್ದು, ಕುಮಾರಸ್ವಾಮಿ ಮೇಲಿನ ಅಭಿಮಾನಕ್ಕೆ ಜನ ಹೆಚ್ಚು ಒಲವು ತೋರಿದ್ದಾರೆ. ಮೈತ್ರಿಯಿಂದಲೇ ಜೆಡಿಎಸ್​ ಗೆಲುವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಚುನಾವಣೆಗೆ 1-2 ತಿಂಗಳು ಮುಂಚೆಯೇ ಅಭ್ಯರ್ಥಿಗಳ ಘೋಷಣೆಯಾಗಿ, ಪ್ರಚಾರದ ಮೂಲಕ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ನಡೆಯಿತು. ಆದರೆ, ಕೋಲಾರದಲ್ಲಿ ಚುನಾವಣೆಯ ದಿನಾಂಕ ಪ್ರಕಟವಾದ ನಂತರ ನಾಮಪತ್ರ ಸಲ್ಲಿಸಲು ಐದು ದಿನ ಬಾಕಿ ಇದ್ದ ಸಮಯದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕೆ.ವಿ.ಗೌತಮ್​ ಹೆಸರು ಪ್ರಕಟಗೊಂಡಿತು. ಮತದಾನಕ್ಕೆ ಕಡಿಮೆ ಅವಧಿಯಿದ್ದ ಕಾರಣ ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗದಿರುವುದೇ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿ&ಜೆಡಿಎಸ್​ ಮೈತ್ರಿ ಕೂಟದಿಂದ ಕ್ಷೇತ್ರವು ಜೆಡಿಎಸ್​ಗೆ ಹಂಚಿಕೆಯಾದ ಬಳಿಕ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಮಲ್ಲೇಶ್​ ಬಾಬು ಆಕಾಂಗಳಾಗಿದ್ದರು. ಎರಡೂ ಪಕ್ಷಗಳ ನಾಯಕರು ಒಮ್ಮತದಿಂದ ಮಲ್ಲೇಶ್​ ಬಾಬು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರು.
ಆದರೆ, ಆಡಳಿತಾರೂಢ ಕಾಂಗ್ರೆಸ್​ನಿಂದ ಅಭ್ಯರ್ಥಿ ಆಯ್ಕೆ ವಿಚಾರ ಬಾರಿ ಸದ್ದು ಮಾಡಿತು. ಅಳೆದು ತೂಗಿ ಗೌತಮ್​ ಆಯ್ಕೆ ಮಾಡಿ ಕ್ಷೇತ್ರದ ಮುಖಂಡರಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಲಿತಾಂಶ ತಲೆಕೆಳಗಾಗಿದ್ದು, ಆಡಳಿತ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

  • ಇಬ್ಬರು ಸಚಿವರಿದ್ದರೂ ಲಿಸಲಿಲ್ಲ ಗೆಲುವು
    ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ಸಚಿವರಾದ ಡಾ.ಎಂ.ಸಿ.ಸುಧಾಕರ್​, ಬೈರತಿ ಸುರೇಶ್​ ಹಾಗೂ ಕಾಂಗ್ರೆಸ್​ ಶಾಸಕರಿಗೆ ನೀಡಲಾಗಿತ್ತು. ಪ್ರಚಾರಕ್ಕೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮುಳಬಾಗಿಲು, ಬಂಗಾರಪೇಟೆಗೆ ಆಗಮಿಸಿದ್ದು, ಮಾಲೂರಿಗೆ ರಾಹುಲ್​ ಗಾಂಧಿ ಅವರನ್ನು ಕರೆಯಿಸಿ ಬೃಹತ್​ ಸಮಾವೇಶ ನಡೆಸಿದ್ದರು. ಐದು ಮಂದಿ ಕಾಂಗ್ರೆಸ್​ ಶಾಸಕರು, ಇಬ್ಬರು ಸಚಿವರು ಇರುವ ಕ್ಷೇತ್ರದಲ್ಲಿ ಗೆಲುವು ಸುಲಭವಾಗಬಹುದು ಎಂದು ನಿರೀೆಯಲ್ಲಿದ್ದ ಗೌತಮ್​ ಅವರಿಗೆ ನಿರಾಸೆಯುಂಟಾಗಿದೆ. ಸಚಿವ ಸುಧಾಕರ್​ ಕ್ಷೇತ್ರದಲ್ಲೂ ಕಾಂಗ್ರೆಸ್​ಗೆ ಹಿನ್ನಡೆಯಾಗಿದೆ. ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಪಟ್ಟ ಪ್ರಯತ್ನ ವಿಲವಾಗಿದೆ ಎಂಬುದು ಲಿತಾಂಶದ ಮೂಲಕ ಸಾಬೀತಾಗಿದೆ.
  • ವಿಧಾನಸಭೆ ಚುನಾವಣೆಯಷ್ಟೇ ಮುನ್ನಡೆ
    ಶ್ರೀನಿವಾಸಪುರದಲ್ಲಿ ಜೆಡಿಎಸ್​ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿಧಾನಸಭೆಯಲ್ಲಿ ಗೆಲುವು ಸಾಧಿಸಿರುವ ಮತಗಳ ಅಂತರದಷ್ಟೇ ಮಲ್ಲೇಶ್​ಗೂ ಮುನ್ನಡೆ ದೊರೆತಿದೆ. ಮಲ್ಲೇಶ್​ ಬಾಬು ಅವರನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಬೇಕು ಎಂದು ಪಣತೊಟ್ಟಿದ್ದ ವೆಂಕಟಶಿವಾರೆಡ್ಡಿ ಪ್ರಯತ್ನಕ್ಕೆ ಮುಖಂಡರು ಸಾಥ್​ ನೀಡಿದರು. ಇನ್ನು ಮಾಜಿ ಸಚಿವ ರಮೇಶ್​ ಕುಮಾರ್​ ಪ್ರಚಾರದ ವೇಳೆ ಒಕ್ಕಲಿಗ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದು, ಜೆಡಿಎಸ್​ಗೆ ಪ್ಲಸ್​ ಆಯಿತು ಎಂದೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
    ಅಂತೆಯೇ, ಶಿಡ್ಲಟ್ಟ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ವಿರುದ್ಧ ಬಂಡಾಯ ಎದ್ದಿದ್ದ ಪುಟ್ಟು ಆಂಜಿನಪ್ಪ ಅವರನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳಲು ರಾಜೀವ್​ಗೌಡ ಸೇರಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಆಂಜಿನಪ್ಪ ಅವರನ್ನು ಸೇರಿಸಿಕೊಂಡರೆ ಕಾಂಗ್ರೆಸ್​ಗೆ ಲಾಭವಾಗುತ್ತದೆ ಎಂಬುದನ್ನು ಅರಿತ ರಾಜ್ಯ ಮುಖಂಡರು ರಾಜೀವ್​ ಗೌಡರನ್ನು ಮನವೊಲಿಸಿ ಕಾಂಗ್ರೆಸ್​ಗೆ ಸೇರಿಸಿಕೊಂಡರು. ಆದರೂ ಹೆಚ್ಚಿನ ಮತ ಪಡೆಯಲು ಸಾಧ್ಯವಾಗಿಲ್ಲ.
  • ರಾಹುಲ್​ ಗಾಂಧಿ ಬಂದರೂ ಮತ ಬರಲಿಲ್ಲ
    ಲೋಕಸಭೆ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆಲ್ಲಿಸಿಕೊಳ್ಳಲಾಗುವುದು ಎಂದು ಮಾಲೂರಿಗೆ ರಾಹುಲ್​ಗಾಂಧಿ ಕ್ಷೇತ್ರಕ್ಕೆ ಆಗಮಿಸಿದ್ದಾಗ ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದರು. ಆದರೆ, ಬಿಜೆಪಿಯ ಹೂಡಿ ವಿಜಯ್​ಕುಮಾರ್​ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಜತೆಗೆ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡ ಪ್ರಚಾರ ನಡೆಸಿದ್ದರು. ಇಲ್ಲಿಗೆ ಮಾಜಿ ಪ್ರಧಾನಿ ದೇವೇಗೌಡರು ಆಗಮಿಸಿ ಹೂಡಿ ಮನೆಗೆ ಭೇಟಿ ನೀಡಿದ್ದು ಜೆಡಿಎಸ್​ ಲಾಭವಾಯಿತು.
  • ಎರಡು ಬಾರಿ ಸೋತಿದ್ದ ಅನುಕಂಪ
    ಬಂಗಾರಪೇಟೆಯ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಲೋಕಸಭೆ ಚುನಾವಣೆಯ ನಂತರ ಸಚಿವ ಸ್ಥಾನ ಸಿಗುವ ನಿರೀೆಯಲ್ಲಿದ್ದರು. ಆದರೆ ಗೌತಮ್​ ಸೋಲು ನಿರಾಸೆಯುಂಟು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕರು ಗೌತಮ್​ಗೆ ಎಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಲೀಡ್​ ಕೊಡಿಸುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್​ ಶೋ ನಡೆಸಿ ಮತಯಾಚನೆ ಮಾಡಿದ್ದರು. ಮಲ್ಲೇಶ್​ ಬಾಬು 2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದಿಂದ ಪರಾಭಾವಗೊಂಡಿದ್ದರು. ಎರಡು ಬಾರಿ ಸೋತಿದ್ದ ಅನುಕಂಪವೂ ಮತಗಳಾಗಿ ಪರಿವರ್ತನೆಯಾಗಿವೆ ಎಂಬ ಚರ್ಚೆ ನಡೆಯುತ್ತಿದೆ.
  • ಸಚಿವಸ್ಥಾನ ನೀಡಲು ಒತ್ತಾಯ
    ಕುಟುಂಬದ ಸದಸ್ಯರಿಗೆ ಟಿಕೆಟ್​ ಸಿಗದಿದ್ದರೂ ಕೆಜಿಎ್​ ಕ್ಷೇತ್ರದಲ್ಲಿ ಶಾಸಕಿ ಎಂ.ರೂಪಕಲಾ ಪಟ್ಟು ಬಿಡದೆ ಕಾಂಗ್ರೆಸ್​ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಅಲ್ಲಿ ಅಧಿಕ ಮತಗಳು ಕಾಂಗ್ರೆಸ್​ಗೆ ಮುನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಸರ್ಕಾರದಲ್ಲಿ ರೂಪಕಲಾ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕ್ಷೇತ್ರದ ಜನರಿಂದ ಕೇಳಿಬಂದಿದೆ.
  • ಪ್ರತಿ ಚುನಾವಣೆಯಲ್ಲೂ ಎನ್​ಡಿಎಗೆ ಮುನ್ನಡೆ
    ಕೇಂದ್ರದ ಚುನಾವಣೆ ಎಂದರೆ ಮುಳಬಾಗಿಲು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ವಾಡಿಕೆಯಾಗಿದೆ. ಕಳೆದ ಚುನಾವಣೆಗಳಲ್ಲೂ ಕಾಂಗ್ರೆಸ್​ಗೆ ಮುನ್ನಡೆ ಬಂದಿರುವ ಇತಿಹಾಸವಿಲ್ಲ. ಕಳೆದ ಚುನಾವಣೆಗಿಂತ ಇಲ್ಲಿ ಅಧಿಕ ಮತಗಳು ಮೈತ್ರಿ ಅಭ್ಯರ್ಥಿಗೆ ಲಭಿಸಿವೆ. ಮುಳಬಾಗಿಲಿಗೆ ಎಚ್​.ಡಿ. ಕುಮಾರಸ್ವಾಮಿ, ಡಾ.ಅಶ್ವತ್ಥನಾರಾಯಣ ಸೇರಿದಂತೆ ಹಲವಾರು ರಾಜ್ಯ ನಾಯಕರು ಪ್ರಚಾರಕ್ಕಾಗಿ ಆಗಮಿಸಿದ್ದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಾಯ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net