ಬಿಲ್ಲು-ಬಾಣಕ್ಕಾಗಿ ಡೀಲ್?: 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ರಾವತ್ ಆರೋಪ

Bow Arrow
Published on

ಮುಂಬೈ: ‘ಶಿವಸೇನೆ’ ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಗಾಗಿ 2 ಸಾವಿರ ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಉದ್ಧವ್ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ. ರಾವತ್ ಅವರ ಹೇಳಿಕೆ ಮಹಾರಾಷ್ಟ್ರದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ‘ನನಗೆ ಖಚಿತ ಮಾಹಿತಿ ಸಿಕ್ಕಿದೆ. ಇದು ಕೇವಲ ಪ್ರಾಥಮಿಕ ಅಂಕಿ-ಅಂಶ ಮಾತ್ರ. ಇದು ಶೇ.100ರಷ್ಟು ದೃಢ ಮಾಹಿತಿ ಎಂದು ರಾವತ್ ಟ್ವೀಟ್ ಮಾಡಿದ್ದಾರೆ. ಆಡಳಿತ ಪಕ್ಷಕ್ಕೆ ಹತ್ತಿರವಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈ ಅವ್ಯವಹಾರವನ್ನು ಶೀಘ್ರದಲ್ಲೇ ಸಾಕ್ಷಿ ಸಮೇತ ಬಹಿರಂಗಪಡಿಸಲಾಗುವುದು ಎಂದು ರಾವತ್ ಹೇಳಿದ್ದಾರೆ. ಈ ರೀತಿಯ ಘಟನೆ ದೇಶದ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿರಲಿಲ್ಲ. ಶಿವಸೇನೆ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ನಮ್ಮಿಂದ ಕಸಿದುಕೊಂಡ ರೀತಿ ನ್ಯಾಯಸಮ್ಮತವಾಗಿಲ್ಲ. ಅದೊಂದು ವ್ಯಾಪಾರ. ಅದನ್ನು ಖರೀದಿಸಲಾಗಿದೆ ಎಂದು ರಾವತ್ ಹೇಳಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ಮಂಜೂರು ಮಾಡಿತ್ತು. ಇದಾದ ಎರಡು ದಿನಗಳ ಬಳಿಕ ರಾವತ್ ಈ ಆರೋಪ ಮಾಡಿದ್ದಾರೆ. ಉದ್ಧವ್ ಠಾಕ್ರೆ ಬಣಕ್ಕೆ ಈ ಹಿಂದೆ ಮಂಜೂರು ಮಾಡಿದ್ದ ಉರಿಯುತ್ತಿರುವ ಟಾರ್ಚ್ ಅನ್ನು ರಾಜ್ಯ ವಿಧಾನಸಭೆಯ ಉಪ ಚುನಾವಣೆ ಮುಗಿಯುವವರೆಗೆ ಇಟ್ಟುಕೊಳ್ಳಲು ಅನುಮತಿ ನೀಡಿದೆ.

ಶಿವಸೇನೆಯ ಶಾಖೆಗಳ ಮೇಲೆ ಏಕನಾಥ ಶಿಂಧೆ ಕಣ್ಣು: ಮುಖ್ಯಮಂತ್ರಿ ಏಕನಾಥ ಶಿಂಧೆ ಈಗ ಶಿವಸೇನೆಯ ಶಾಖೆಗಳ (ಸ್ಥಳೀಯ ಪಕ್ಷದ ಕಚೇರಿಗಳು) ಮೇಲೆ ಕಣ್ಣಿಟ್ಟಿದ್ದಾರೆ. ಈ ಶಾಖೆಗಳನ್ನು ಪಕ್ಷದ ಸಾಂಸ್ಥಿಕ ರಚನೆಗೆ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ದಾದರ್​ನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಾದ ಶಿವಸೇನಾ ಭವನದ ಮಾಲೀಕತ್ವವನ್ನು ತಾವು ಪಡೆಯುವುದಿಲ್ಲ ಎಂದು ಶಿಂಧೆ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಎರಡು ಕಾದಾಡುತ್ತಿರುವ ಬಣಗಳ ನಡುವೆ ಈ ಶಾಖಾ ಹೋರಾಟವು ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಶಾಖಾ ಪ್ರಮುಖರು (ಕಚೇರಿಗಳ ಮುಖ್ಯಸ್ಥರು) ಇನ್ನು ಮುಂದೆ ಸಿಎಂ ಅವರನ್ನು ಬೆಂಬಲಿಸುತ್ತಾರೆ. ಶಾಖಾ ಕಚೇರಿಗಳಲ್ಲಿರುವ ಉದ್ಧವ್, ಆದಿತ್ಯ ಅವರ ಫೋಟೋಗಳನ್ನು ತೆಗೆದು ಏಕನಾಥ ಶಿಂಧೆ, ಬಾಳ್​ಠಾಕ್ರೆ ಮತ್ತು ಆನಂದ್ ದಿಘ ಅವರ ಫೋಟೊಗಳನ್ನು ಹಾಕಲಾಗುವುದು ಎಂದು ಶಿಂಧೆ ಬಣದ ನಾಯಕರು ಹೇಳಿದ್ದಾರೆ.

ಸುಪ್ರೀಂಕೋರ್ಟ್​ಗೆ ಕೇವಿಯಟ್: ಚುನಾವಣಾ ಆಯೋಗದ ತೀರ್ಪನ್ನು ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುವ ತೀರ್ಮಾನ ಮಾಡಿದ್ದು, ಅದಕ್ಕೂ ಮೊದಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸುಪ್ರೀಂಕೋರ್ಟ್ ಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸಲ್ಲಿಸುವ ಯಾವುದೇ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು ಮಹಾರಾಷ್ಟ್ರ ಸರ್ಕಾರದ ನಿಲುವು ಏನೆಂಬುದನ್ನು ತಿಳಿದುಕೊಳ್ಳಬೇಕು ಎಂದು ಶಿಂಧೆ ಕೇವಿಯಟ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಉದ್ಧವ್ ಠಾಕ್ರೆ ಅವರಿಗೂ ಮೊದಲೇ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸುವ ಮೂಲಕ ಏಕನಾಥ ಶಿಂಧೆ ಜಾಣನಡೆ ಪ್ರದರ್ಶಿಸಿದ್ದಾರೆ ಎಂದು ವಿಶ್ಲೇಷಿಸ ಲಾಗುತ್ತಿದೆ. ಚುನಾವಣಾ ಆಯೋಗದ ನಿರ್ಧಾರವು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಣ್ಣಿಸಿರುವ ಉದ್ಧವ್ ಠಾಕ್ರೆ, ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಸತ್ಯದ ದರ್ಶನವಾಗಿದೆ: ಅಧಿಕಾರಕ್ಕಾಗಿ ಸೈದ್ಧಾಂತಿಕ ವೈರಿಗಳ ಜತೆ ಮೈತ್ರಿ ಮಾಡಿಕೊಂಡವರಿಗೆ ಈಗ ಸತ್ಯದ ದರ್ಶನವಾಗಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಪುಣೆಯಲ್ಲಿ ಮೋದಿ ಃ20 ಮರಾಠಿ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಹೆಸರನ್ನು ಉಲ್ಲೇಖಿಸದೆ ಟೀಕಿಸಿದ್ದಾರೆ. 2019ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಬಗ್ಗೆ ಯಾವುದೇ ಒಪ್ಪಂದ ಆಗಿರಲಿಲ್ಲ. ಒಟ್ಟಾಗಿ ಚುನಾವಣೆ ಎದುರಿಸಿದ್ದೆವು. ಆದರೆ ಫಲಿತಾಂಶ ಪ್ರಕಟವಾದ ನಂತರ ಅಧಿಕಾರಕ್ಕಾಗಿ ಕೆಲವರು ವಿರೋಧಿ ಸಿದ್ಧಾಂತಗಳನ್ನು ಹೊಂದಿದ ಪಕ್ಷಗಳೊಂದಿಗೆ ಕೈ ಜೋಡಿಸಿದರು. ಸುಳ್ಳು ಹೇಳಿಕೆಗಳನ್ನು ನೀಡುತ್ತ ತಿರುಗಾಡುತ್ತಿದ್ದವರಿಗೆ ಇಂದು ಸತ್ಯದ ಮನವರಿಕೆಯಾಗಿದೆ. ಸತ್ಯಮೇವ ಜಯತೇ ಎಂಬುದನ್ನು ಚುನಾವಣಾ ಆಯೋಗ ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಶರದ್ ಪವಾರ್ ಪ್ರತಿಕ್ರಿಯೆ: ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ ಹೆಸರು, ಬಿಲ್ಲು- ಬಾಣ ನೀಡಿರುವ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಚಿಹ್ನೆ ವಿವಾದದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ರಾಷ್ಟ್ರೀಯ ವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಬಿಲ್ಲು ಬಾಣದ ಚಿಹ್ನೆ ಸಿಗದಿರುವುದರಿಂದ ಯಾವುದೇ ವ್ಯತ್ಯಾಸವಾಗು ವುದಿಲ್ಲ. ಏಕೆಂದರೆ ಅವರು ಹೊಸ ಚುನಾವಣಾ ಚಿಹ್ನೆ ಸ್ವೀಕರಿಸುತ್ತಾರೆಂದು ಹೇಳಿದ್ದಾರೆ.

ಶಿಂಧೆ ಬಣದ ತಿರುಗೇಟು: ‘ಸಂಜಯ್ ರಾವತ್ ಕ್ಯಾಷಿಯರ್ ಆಗಿದ್ದಾರೆಯೇ? ಎಂದು ಶಾಸಕ ಸದಾ ಸರ್ವಂಕರ್ ಪ್ರಶ್ನಿಸಿದ್ದಾರೆ. ಇಂತಹ ಆಧಾರರಹಿತ ಹೇಳಿಕೆಗಳು ಸುಪ್ರೀಂಕೋರ್ಟ್ ಮತ್ತು ಭಾರತೀಯ ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಗಳ ಹೆಸರನ್ನು ಕೆಡಿಸುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವವನ್ನು ಅಗೌರವಿಸುವಂತಹ ಹೇಳಿಕೆ ನೀಡುವವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಜನರು ‘ಒಂದೋ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ ಅಥವಾ ಹುಚ್ಚರಾಗಿದ್ದಾರೆ’ ಎಂದು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net