ಅ.27ಕ್ಕೆ ಜಿಕೆವಿಕೆಯಲ್ಲಿ ‘ಕೃಷಿ ಪರಿಸರದಲ್ಲಿ ಅಂಗವಿಕಲರೊಂದಿಗೆ ಒಂದು ದಿನ’

gkvk
Published on

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ತನ್ನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಇದೇ ಮೊದಲ ಬಾರಿಗೆ ಕೃಷಿ ಚಟುವಟಿಕೆ ಕುರಿತು ವಿಶೇಷಚೇತನರಿಗೆ ಮಾಹಿತಿ ಒದಗಿಸಲು ಶನಿವಾರ (ಅ.27) ‘ಕೃಷಿ ಪರಿಸರದಲ್ಲಿ ಅಂಗವಿಕಲರೊಂದಿಗೆ ಒಂದು ದಿನ’ ಕಾರ್ಯವನ್ನು ಆಯೋಜಿಸಿದೆ.

ಮುಂಬರುವ ನ.14ರಿಂದ 17ರ ವರೆಗೆ ಜಿಕೆವಿಕೆಯಲ್ಲಿ ಕೃಷಿ ಮೇಳ ಆಯೋಜನೆಯಾಗಿದೆ. ಈ ಮೇಳವನ್ನು ಅಂಗವಿಕರು ಕಣ್ತುಂಬಿಕೊಳ್ಳಲು ಸಾಧ್ಯವಾಗದ ಕಾರಣ ಇವರಿಗಾಗಿಯೇ ವಿಶೇಷ ಕಾರ್ಯಕ್ರಮವನ್ನು ರೂಪಿಸಿ ಕೃಷಿ ಬಗ್ಗೆ ಜ್ಞಾನ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷಚೇತನ ಶಾಲೆಗಳು ಹಾಗೂ ಸಂಘ-ಸಂಸ್ಥೆಗಳು 8ರಿಂದ 18 ವರ್ಷದ ಮಕ್ಕಳನ್ನು ಕರೆತರತರಲಿದ್ದು, ಒಂದು ದಿನ ಜಿಕೆವಿಕೆಯ ಹಸಿರು ಪರಿಸರದಲ್ಲಿ ಉಪಯುಕ್ತ ಸಮಯವನ್ನು ಕಳೆಯಲಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಂಗ್ರಹಾಲಯ, ಮಧುವನ, ಸಮಗ್ರ ಕೃಷಿ ಕ್ಷೇತ್ರಕ್ಕೆ ಭೇಟಿಯ ಅವಕಾಶ ಕಲ್ಪಿಸಲಾಗಿದೆ. ವಿವಿಯ ತಜ್ಞರು ಮಾಹಿತಿ ನೀಡಲಿದ್ದಾರೆ. ಮಕ್ಕಳಿಗೆ ಕಲಿ-ನಲಿ ತತ್ವದಡಿ ಕೃಷಿ ಹಾಗೂ ಪರಿಸರಕ್ಕೆ ಸಂಬಂಧಪಟ್ಟ ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ದಿ ಅಸೋಸಿಯೆಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ, ವಾಯ್ಸ ಆಫ್ ನೀಡಿ ಫೌಂಡೇಶನ್, ಕಲ್ಪವೃಕ್ಷ, ಬೆಳಕು ಹಾಗೂ ಇತರ ಸಂಸ್ಥೆಗಳ 200ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಎಂದು ಕೃಷಿ ವಿವಿ ಕುಲಪತಿಯವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net