

ಕಲಬುರಗಿ: ನಾಡಿನ ಪ್ರಸಿದ್ಧ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಹೆಸರಿನಲ್ಲಿ ನಕಲಿ ವೆಬ್ಸೈಟ್ಗಳು ಪತ್ತೆಯಾಗಿವೆ. ನಕಲಿ ವೆಬ್ಸೈಟ್ಗಳನ್ನು ತೆರೆದು ಪೂಜೆ, ಹೋಮದ ಹೆಸರಲ್ಲಿ ಕೋಟ್ಯಂತರ ರೂಪಾಯಿ ಧೋಖಾ ಮಾಡಲಾಗಿದೆ.
ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ವೆಬ್ಸೈಟ್ ಇರುವಾಗಲೇ ಕೆಲ ಅರ್ಚಕರು ಗೊಂದಲ ಮೂಡಿಸುವಂಥ ಹೆಸರುಗಳಲ್ಲಿ ವೆಬ್ಸೈಟ್ ಆರಂಭಿಸಿ ಭಕ್ತರಿಗೆ ಮಕ್ಮಲ್ ಟೋಪಿ ಹಾಕಿ ಸರ್ಕಾರಿ ಖಜಾನೆಗೆ ಸೇರಬೇಕಿದ್ದ ಕೋಟ್ಯಂತರ ಹಣ ಲಪಟಾಯಿಸಿದ್ದಾರೆ.
ಅಕ್ರಮವಾಗಿ ವೆಬ್ಸೈಟ್ ತೆರೆದಿರುವ ಆರೋಪದ ಮೇರೆಗೆ ಅರ್ಚಕರಾದ ವಲ್ಲಭ ಭಟ್ಟ ಪೂಜಾರಿ, ಅಂಕುರ್ ಪೂಜಾರಿ, ಪ್ರತಿಕ್ ಪೂಜಾರಿ, ಗಂಗಾಧರ ಭಟ್ಟ ಪೂಜಾರಿ, ಶರತ್ ಭಟ್ಟ ಪೂಜಾರಿ ಇತರರ ವಿರುದ್ಧ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ನೀಡಿದ ದೂರಿನನ್ವಯ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ. ಸಿಪಿಐ ಜಗದೇವಪ್ಪ ಪಾಳಾ ತನಿಖೆ ಆರಂಭಿಸಿದ್ದು, ಹಲವು ಮಾಹಿತಿ ಕಲೆ ಹಾಕುವ ಕೆಲಸ ನಡೆದಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಯಶವಂತ ಗುರುಕರ್ ಮಂಗಳವಾರ ಸಭೆ ನಡೆಸಲು ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿದಾಗ ದೇಗುಲ ಮತ್ತು ಕ್ಷೇತ್ರದ ಹೆಸರಿನಲ್ಲಿ ನಕಲಿ ವೆಬ್ಸೈಟ್ಗಳನ್ನು ಕೆಲ ಅರ್ಚಕರು ತೆರೆದು ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ತನಿಖೆ ಬಳಿಕ ಎಲ್ಲವೂ ಬಯಲಿಗೆ: ದತ್ತಾತ್ರೇಯ ದೇವಸ್ಥಾನ ಹೆಸರಿನಲ್ಲಿ ಆರೇಳು ನಕಲಿ ವೆಬ್ಸೈಟ್ ಪತ್ತೆಯಾಗಿದ್ದು, ದೂರು ದಾಖಲಿಸಲಾಗಿದೆ. ತನಿಖೆಯಲ್ಲಿ ಎಲ್ಲ ಸತ್ಯಾಂಶ ಬಯಲಿಗೆ ಬರಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದ್ದಾರೆ. ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ನಕಲಿ ವೆಬ್ಸೈಟ್ಗಳ ಪೈಕಿ ಒಂದು ಖಾತೆಗೆ ಸುಮಾರು 28 ಸಾವಿರ ಭಕ್ತರು ಭೇಟಿ ನೀಡಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ನಕಲಿ ವೆಬ್ಸೈಟ್ಗಳಲ್ಲಿ ಖಾತೆ ಸಂಖ್ಯೆ ನೀಡಿ ಹಣಕಾಸು ವಹಿವಾಟು ನಡೆದಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬುದು ನಿಖರವಾಗಿ ಗೊತ್ತಿಲ್ಲ. ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.