

ಬೆಂಗಳೂರು: ಗಂಭೀರ ಸ್ವರೂಪ, ಹೀನ ಕೃತ್ಯದ ಅಪರಾಧಿಗಳ ತ್ವರಿತ ಪತ್ತೆ ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಗಮನಾರ್ಹ ಹೆಜ್ಜೆಯಿಟ್ಟಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಅಪರಾಧ ಕೃತ್ಯದ ಸ್ಥಳ ಪರಿಶೀಲನಾ ಅಧಿಕಾರಿಗಳ ಹುದ್ದೆಗಳನ್ನು ಸೃಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನಸೌಧ ಮಹಾದ್ವಾರದ ಬಳಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಸಬಲೀಕರಣಕ್ಕೆ ವಿವಿಧ ಯೋಜನೆಗಳ ಸಮರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಅಪರಾಧ ಕೃತ್ಯದ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಗಳ ಆದೇಶ ಪ್ರತಿಯನ್ನು ಪೊಲೀಸ್ ಮಹಾ ನಿರ್ದೇಶಕರಿಗೆ ಹಸ್ತಾಂತರಿಸಿದ ನಂತರ ಮಾತನಾಡಿದ ಸಿಎಂ ಬಿಎಸ್‌ವೈ, ಗುರುತರ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ನಿಷ್ಠೆಯಿಂದ ನಿರ್ವಹಿಸುತ್ತಿದ್ದು, ಇಲಾಖೆ ಮೂಲ ಸವಲತ್ತು ಸುಧಾರಣೆ, ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಲಹೆಯಂತೆ ಅಪರಾಧ ಘಟನಾ ಸ್ಥಳದ ಪರಿಶೀಲನಾ ಅಧಿಕಾರಿ ಹುದ್ದೆಗಳನ್ನು ಸೃಷ್ಟಿಸಿದ್ದು, ಮೊದಲ ಹಂತದಲ್ಲಿ 206 ಅಧಿಕಾರಿಗಳ ನೇಮಕವಾಗಿದೆ. ಹೊಸ ಸೃಜನೆಯಾದ ಹುದ್ದೆಗಳಿಗೆ ನೇಮಕವಾದ ಅಧಿಕಾರಿಗಳಿಗೆ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ತರಬೇತಿ ನೀಡಲಾಗುವುದು ಎಂದರು.
ಶಾಸಕ ಅರ್ಷದ್ ರಿಜ್ವಾನ್, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣಸೂದ್ ಉಪಸ್ಥಿತರಿದ್ದರು.