

ಶಿಕಾರಿಪುರ: ನಿರಂತರವಾಗಿ ಸುರಿಯುತ್ತಿರುವ ಹಿಂಗಾರು ಮಳೆಯಿಂದಾಗಿ ಈಸೂರಿನ ಹೆಗ್ಗೆರೆ ಕೆರೆ ಏರಿ ಬಿರುಕುಬಿಟ್ಟಿದೆ. ಕಳೆದ ಏಳೆಂಟು ವರ್ಷಗಳಿಂದಲೂ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಮತ್ತು ಕೆರೆಯ ಬದಿಯ ಜಮೀನುಗಳಿಗೆ ಹೋಗಿ ಬರಲು ರೈತರಿಗೆ ತೊಂದರೆಯಾಗಿದೆ. ಮಳೆ ಮುಂದುವರಿದರೆ ಏರಿ ಕುಸಿಯುವ ಸಾಧ್ಯತೆ ಇದೆ.
ಕೆಲದಿನಗಳ ಹಿಂದೆ ಏರಿ ಕುಸಿತದ ಪರಿಣಾಮದಿಂದ ಖಾಸಗಿ ಬಸ್ ಕೆರೆಗೆ ಬೀಳುವ ಸ್ಥಿತಿಯಲ್ಲಿತ್ತು. ಆದರೆ ಮರ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿತ್ತು. ಈಗ 400 ಮೀಟರ್ ಉದ್ದದ ಕೆರೆ ಏರಿ ರಸ್ತೆಯ ಒಂದು ಬದಿಯ ಏರಿ 10 ಅಡಿ ಬಿರುಕು ಬಿಟ್ಟಿದೆ. ಇದರಿಂದ ಅಚ್ಚುಕಟ್ಟುದಾರ ರೈತರಿಗೆ ಆತಂಕ ಉಂಟಾಗಿದೆ.
ಹೆಗ್ಗೆರೆ ಕೆರೆ ದುರಸ್ತಿ ಬಗ್ಗೆ ತಕ್ಷಣ ಗಮನಹರಿಸಬೇಕು. ಪಿಡಬ್ಲುೃಡಿ ಅಧಿಕಾರಿಗಳು ಬಂದು ಸರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ ದುರಸ್ತಿ ಕಾರ್ಯ ತಳಮಟ್ಟದಿಂದಲೇ ಆಗಬೇಕು ಎಂದು ಈಸೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆಯನ್ನು ಶಾಶ್ವತವಾಗಿ ಸರಿಪಡಿಸಲು 4 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಆದರೆ ಅನುದಾನದ ಕೊರತೆಯಿಂದ ಮಾಡಲು ಆಗಿಲ್ಲ. ಈಗ ಈ ರಸ್ತೆಯನ್ನು ಒನ್ ವೇ ಮಾಡಿ ಶಿವಮೊಗ್ಗದ ಕಡೆಯಿಂದ ಬರುವ ಬಸ್‌ಗಳು ಮಾತ್ರ ಕೆರೆ ಏರಿಯ ಮೇಲೆ ಬರುವಂತೆ, ಈಸೂರಿನಿಂದ ಹೋಗುವ ಬಸ್‌ಗಳು ಬೇರೆ ಮಾರ್ಗದಲ್ಲಿ ತೆರಳುವಂತೆ ಮಾಡಲು ಹಿರಿಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದೇನೆ ಪಿಡಬ್ಲುೃಡಿ ಎಇಇ ಮಂಜುನಾಥ್ ತಿಳಿಸಿದ್ದಾರೆ.