

ವಿರಾಜಪೇಟೆ: ಹಲವು ಸಂಸ್ಕೃತಿ, ವಿಭಿನ್ನತೆಯ ಆಚರಣೆ, ಹಲವಾರು ಹಬ್ಬಗಳ ಆಚರಣೆಯಿಂದಾಗಿ ದೇಶ ಸುಸಂಸ್ಕೃತವಾಗಿದೆ. ವಿಜಯದಶಮಿ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ ವತಿಯಿಂದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ 18ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು ಸಾರ್ವಜನಿಕ ವಲಯದ ಬೆನ್ನೆಲುಬು. ವಿಜಯದಶಮಿ ದುಷ್ಟ ಶಕ್ತಿಗಳನ್ನು ಸಂಹರಿಸಿ, ಶಿಷ್ಟ ರಕ್ಷಣೆ ಮಾಡಿರುವ ಐತಿಹ್ಯ ಹೊಂದಿದೆ. ಆಯುಧ ಪೂಜೆಯ ಅಂಗವಾಗಿ ವಿವಿಧ ಧರ್ಮದ ಗುರುಗಳನ್ನು ಆಹ್ವಾನಿಸಿ ಆಶೀರ್ವಚನ ಮಾಡುವುದು ರೂಢಿಯಲ್ಲಿದೆ. ನಮ್ಮಲ್ಲಿ ಜಾತಿ, ಧರ್ಮ, ಬೇರೆ ಬೇರೆ ಎನ್ನುವ ಭೇದ-ಭಾವವಿಲ್ಲದೆ ಒಂದೇ ಎನ್ನುವ ಸಂಸ್ಕೃತಿ ಇದೆ. ಬಸ್ ಕಾರ್ಮಿಕರ ಬದುಕು ಸಂಕಷ್ಟದ ಸ್ಥಿತಿಯನ್ನು ತಲುಪಿದೆ. ಅದರೂ ಸಮಾಜ ಮತ್ತು ಸಾರ್ವಜನಿಕ ವಲಯಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಒದಗಿಸುತ್ತಿದೆ. ಕಾರ್ಮಿಕ ವಲಯದ ಏಳಿಗೆಗೆ ಸರ್ಕಾರ ಬದ್ದವಾಗಿದೆ. ಎಲ್ಲ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾಗಿದ್ದು. ಕಾರ್ಮಿಕರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದರು.
ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಫಿ ಜುಮ್ಮಾ ಮಸೀದಿ ಖತೀಬರಾದ ಬಹು ಹ್ಯಾರಿಸ್ ಬಾಖವಿ, ಸಂತ ಅನ್ನಮ್ಮ ಕಾಲೇಜು ವಿರಾಜಪೇಟೆ ಪ್ರಾಂಶುಪಾಲ ರೆ.ಫಾ.ಮುಧಲೈ ಮುತ್ತು ಆಶೀರ್ವಚನ ನೀಡಿದರು.
ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ವಿರಾಜಪೇಟೆ ಗೌರವ ಅಧ್ಯಕ್ಷ ಅಲ್ಲಂಡ ಚೆಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಖಾಸಗಿ ಬಸ್‌ಗಳಿಗೆ ಸಾಮೂಹಿಕ ಆಯುಧ ಪೂಜೆ ನಡೆಯಿತು. ಸ್ಥಳಿಯ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಮೈ ರೋಮಾಂಚನಗೊಳಿಸುವ ಕೊಡಗು ಜಿಲ್ಲೆಯ ನುರಿತ ಬೈಕ್ ಸವಾರರಿಂದ ಬೈಕ್‌ಗಳ ಸಾಹಸ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಹಿನ್ನೆಲೆಯಲ್ಲಿ ಗಾಯಕರಾದ ಪ್ರೀತಂ, ರಶ್ಮಿ ಮಾರಾವಿ ಮತ್ತು ಬಿಗ್ ಬ್ಯಾಂಡ್ ಕ್ಯಾಲಿಕಟ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.