

ಬೆಂಗಳೂರು: ಮೇ 1ರಿಂದ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಹಾಕಲಾಗುವುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಅದರಂತೆ ಕೋಟ್ಯಂತರ ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡು ಮೇ ತಿಂಗಳ ಆರಂಭಕ್ಕೆ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.
ಇದೀಗ ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬೇಡಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಜನರಿಗೆ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಅದರ ಅನ್ವಯ 3ರಿಂದ 3.5 ಕೋಟಿ ಜನ ಕರ್ನಾಟಕದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. 1 ಕೋಟಿ ಕೋವಿ ಶೀಲ್ಡ್ಗೆ 400 ಕೋಟಿ ರೂಪಾಯಿ ಕೊಟ್ಟು ಆರ್ಡರ್ ಮಾಡಿದ್ದೇವೆ. 28ನೇ ತಾರೀಖಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ನೋಂದಣಿ ಮಾಡಿಕೊಳ್ಳಿ. ಆದರೆ, ಮೇ 1ರಿಂದಲೇ ಲಸಿಕೆ ಹಾಕಿಸಿಕೊಳ್ಳಲೆಂದು ಆಸ್ಪತ್ರೆ ಬಳಿಗೆ ಬರಬೇಡಿ ಎಂದರು.
ಕಂಪನಿಗಳು ಲಸಿಕೆಯನ್ನು ಯಾವಾಗ ಕೊಡುತ್ತೆ ಅಂತ ಖಚಿತ ಮಾಹಿತಿ ನಮಗಿನ್ನೂ ಬಂದಿಲ್ಲ. ಹಾಗಾಗಿ ಲಸಿಕೆ ಹಾಕುವ ಕಾರ್ಯಕ್ರಮ ನಾಳೆ ಆರಂಭವಾಗಲ್ಲ. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ. ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಕೊಡುತ್ತೇವೆ. 45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಯ 99 ಲಕ್ಷ ಡೋಸ್ನಲ್ಲಿ 95 ಲಕ್ಷ ಡೋಸನ್ನು ಈಗಾಗಲೇ ನೀಡಲಾಗಿದೆ ಎಂದರು.