

ಬೆಂಗಳೂರು: ಆರ್ಥಿಕತೆ ವೃದ್ಧಿಗೆ ಉತ್ತೇಜನ, ಪ್ರಮುಖ ಅಭಿವೃದ್ಧಿ ಚಟುವಟಿಕೆಗಳತ್ತ ರಾಜ್ಯ ಸರ್ಕಾರ ಗಮನಹರಿಸಿರುವ ನಡುವೆಯೇ ಕರೊನಾ ಮೂರನೇ ಅಲೆ ಸವಾಲು ಎದುರಾಗಿದ್ದು, ಈ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿದೆ.
ತೆರಿಗೆ ವಿಕೇಂದ್ರೀಕರಣ ವ್ಯವಸ್ಥೆಯಡಿ ಮುಂಗಡವಾಗಿ 3,467.62 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಆತ್ಮಸ್ಥೈರ್ಯ ತುಂಬಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಡುಗಡೆಯಾದ ಒಟ್ಟು ಮೊತ್ತದಲ್ಲಿ ರಾಜ್ಯ ಪಾಲಿನ 2022ರ ಜನವರಿ ತೆರಿಗೆ ಕಂತು 1733.81 ಕೋಟಿ ರೂ. ಸೇರಿದ್ದು, ಇಷ್ಟೇ ಮೊತ್ತವನ್ನು ಮುಂಗಡ ರೂಪದಲ್ಲಿ ನೀಡಿದೆ ಎಂದು ಬೊಮ್ಮಾಯಿ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಸಕಾಲದಲ್ಲಿ ನೀಡಿದ ನೆರವಿನಿಂದ ಮಹತ್ವದ ಅಭಿವೃದ್ಧಿ ಕಾರ್ಯಗಳು, ಆರ್ಥಿಕತೆ ಹೆಚ್ಚಳ, ವಿಶೇಷವಾಗಿ ಕರೊನಾ ಮೂರನೇ ಅಲೆ ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗಲಿದೆ ಎಂದು ಸಿಎಂ ಹೇಳಿದ್ದಾರೆ.