

ಬೆಂಗಳೂರು: ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಪದೇ ಪದೆ ದೂಷಿಸುವ ಷಡ್ಯಂತ್ರ ಮಾಡುತ್ತಿದೆ(A conspiracy to blame the Centre to cover up the mistakes of the Congress government) . ದಾಖಲೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಸಾಲ ಕೂಡ ದಾಖಲೆ ಪ್ರಮಾಣದಲ್ಲಿ ಏರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B Y Vijayendra) ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರದಿಂದ ಶೇ.4.71 ರಷ್ಟು ತೆರಿಗೆ ಪಾಲು ರಾಜ್ಯಕ್ಕೆ ಬರುತ್ತಿದ್ದರೂ ವೃಥಾ ಅರೋಪ ಮಾಡಲಾಗುತ್ತದೆ. 2004-14 ರವರೆಗೆ 81,791 ಕೋಟಿ ರೂ. ತೆರಿಗೆ ಹಂಚಿಕೆಯಾಗಿದ್ದರೆ, 2014-24 ರವರೆಗೆ 2.95 ಲಕ್ಷ ಕೋಟಿ ರೂ. ಹಂಚಿಕೆಯಾಗಿದೆ. ಇದು ಶೇ.262 ರಷ್ಟು ಹೆಚ್ಚಾಗಿದೆ. ಇದನ್ನು ಮರೆ ಮಾಚಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಹೊರಿಸುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಹಣದುುಬ್ಬರ ಪ್ರಮಾಣವು ದೇಶದಲ್ಲೇ ಅತಿ ಹೆಚ್ಚಿದ್ದು, ಶೇ.5.03 ರಷ್ಟು ಹಣದುಬ್ಬರವಿದೆ. ರಾಜ್ಯ ಸರ್ಕಾರ 4.09 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 1.16 ಲಕ್ಷ ಕೋಟಿ ರೂ. ಸಾಲವನ್ನೇ ಮಾಡಿದೆ. ಒಟ್ಟು ಸಾಲದ ಮೊತ್ತವು 7.06 ಲಕ್ಷ ಕೋಟಿ ರೂ.ಆಗಲಿದೆ. 2025-26ನೇ ಸಾಲಿನ ಅಂತ್ಯಕ್ಕೆ ರಾಜ್ಯ ಸರಕಾರವು 45,600 ಕೋಟಿ ಬಡ್ಡಿ ಪಾವತಿಸಬೇಕಾಗುತ್ತದೆ. 2027-28ಕ್ಕೆ ಸುಮಾರು 60 ಸಾವಿರಕ್ಕೂ ಹೆಚ್ಚು ಕೋಟಿ ರೂ. ಕೇವಲ ಬಡ್ಡಿಗೇ ಮೀಸಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2027-28ಕ್ಕೆ ರಾಜ್ಯದ ಒಟ್ಟು ಸಾಲ 9 ಲಕ್ಷ ಕೋಟಿ ದಾಟಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಲದ ಹೊರೆ ತಗ್ಗಿಸುವ ಸಲುವಾಗಿ ಹಣಕಾಸಿನ ಸಚಿವರು ಯಾವುದೇ ಕ್ರಿಯಾಯೋಜನೆ ರೂಪಿಸಿಲ್ಲ ಎಂದು ವಿವರಿಸಿದರು. ಸರ್ಕಾರದ ಬದ್ಧ ವೆಚ್ಚ, ಗ್ಯಾರಂಟಿಗಳ ವೆಚ್ಚವು ಬಜೆಟ್‌ನ ಶೇ. 80ರಷ್ಟಾಗಿದೆ. ಬಂಡವಾಳ ವೆಚ್ಚಕ್ಕೆ ಸಿಗಬೇಕಾದಷ್ಟು ಅನುದಾನ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಕಡೆ ಬೆಲೆ ಏರಿಕೆ ಪರಿಣಾಮವಾಗಿ ಹಣದುಬ್ಬರ ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಹಣದುಬ್ಬರ ಇದೆ. ಶೇ 5.03ರಷ್ಟು ಹಣದುಬ್ಬರ ನಮ್ಮ ರಾಜ್ಯದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ 3.39 ರಷ್ಟಿದೆ. ಆಂಧ್ರ ಪ್ರದೇಶ 4.02, ಗುಜರಾತ್ 3.88 ರಷ್ಟಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಹಣದುಬ್ಬರ ನಮ್ಮ ರಾಜ್ಯದಲ್ಲಿ ಇದೆ ಎಂದು ಗಮನ ಸೆಳೆದರು.
ಜಿಡಿಪಿ ದರ 2022-23ರಲ್ಲಿ ಅದು 14.2 ಶೇಕಡಾದಷ್ಟಿತ್ತು. ಈ ಕಾಂಗ್ರೆಸ್ ಸರ್ಕಾರ ಬಂದ ಬಳಿಕ 2023-24ರಲ್ಲಿ 9.6 ಶೇಕಡಾದಷ್ಟಾಗಿದೆ. ಅಂದರೆ ಹಿಂದಿನ ಬಿಜೆಪಿ ಸರಕಾರದಲ್ಲಿ 14.2 ಶೇ ಇದ್ದರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅದು ಶೇ 9.6ಕ್ಕೆ ಇಳಿದಿದೆ. ಆರ್ಥಿಕ ಪರಿಸ್ಥಿತಿ ಏನಾಗುತ್ತಿದೆ ಎಂದು ನಾವು ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು.
ಈ ಸರ್ಕಾರ ಬಂದ ಬಳಿಕ 2.95ರಷ್ಟು ಹಣಕಾಸಿನ ಕೊರತೆ ಜಾಸ್ತಿ ಆಗಿದೆ. ಅದು ಬಿಜೆಪಿ ಸರಕಾರದಲ್ಲಿ 2.14ರಷ್ಟಿದ್ದರೆ, ಈಗ 2.95ಕ್ಕೆ ಏರಿದೆ. ಕೈಗಾರಿಕಾ ಬೆಳವಣಿಗೆ ವಿಷಯದಲ್ಲಿ ಇಡೀ ದೇಶದಲ್ಲಿ ಎಲ್ಲ ರಾಜ್ಯಗಳು ಸ್ಪರ್ಧೆಗಿಳಿದಿವೆ. 20 ತಿಂಗಳಿನಿಂದ ಈ ಸರ್ಕಾರ ಕೈಗಾರಿಕಾ ಬೆಳವಣಿಗೆ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇದರ ಪರಿಣಾಮವಾಗಿ 2024-25ರಲ್ಲಿ ನಮ್ಮ ರಾಜ್ಯದ ಕೈಗಾರಿಕಾ ಬೆಳವಣಿಗೆ ದರ 5.8 ಶೇಕಡಾದಷ್ಟಿದೆ ಎಂದು ವಿಜಯೇಂದ್ರ ಹೇಳಿದರು.
ಈ ಬಜೆಟ್ ಅವಲೋಕನ ಮಾಡಿದರೆ ಇದು ರಾಜ್ಯದ ಯಾವುದೇ ವರ್ಗದ ಜನರಿಗೆ ಸಂತೃಪ್ತಿ ತಂದಿಲ್ಲ. ನಾಡಿನ ಕೃಷಿಕರು, ಬಡವರು, ಮಹಿಳೆಯರು, ಯುವಕರು ಸೇರಿ ಎಲ್ಲರಿಗೂ ಈ ಬಜೆಟ್ ನಿರಾಸೆ ತಂದಿದೆ. ಶಿಕ್ಷಣ, ಆರೋಗ್ಯ ಸೇರಿ ಯಾವುದೇ ಆದ್ಯತಾ ಕ್ಷೇತ್ರಗಳಿಗೂ ಗಮನ ಹರಿಸಿಲ್ಲ ಎಂದು ಟೀಕಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಪಾಲುದಾರಿಕೆ ಕುಸಿದಿದೆ. ತೊಗರಿ ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ರೈತರಿಗೆ 7 ತಾಸು ವಿದ್ಯುತ್ ಕೊಡಲಾಗದ ಸ್ಥಿತಿ ಇದೆ. ಅತಿಥಿ ಉಪನ್ಯಾಸಕರು, ದಾದಿಯರು, ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗೌರವಧನಕ್ಕಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ಕಿಂಚಿತ್ತೂ ಕನಿಕರ ಇಲ್ಲ. ಗೌರವ ಧನ ಹೆಚ್ಚಿಸುತ್ತಿಲ್ಲ ಎಂದು ವಿಜಯೇಂದ್ರ ದೂರಿದರು.