

ತುಮಕೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ನ ಸಿಎಂ ಅಭ್ಯರ್ಥಿ ಯಾರು? ಎಂಬ ಕುತೂಹಲ ಮೂಡಿದೆ. ಕಾಂಗ್ರೆಸ್ನ ಯಾವುದೇ ಸಭೆ-ಸಮಾವೇಶದಲ್ಲೂ 'ನೆಕ್ಸ್ಟ್ ಸಿಎಂ ಸಿದ್ದರಾಮಯ್ಯ', 'ಮುಂದಿನ ಸಿಎಂ ಡಿಕೆಶಿ' ಎಂಬ ಘೋಷಣೆಗಳು ಜಿದ್ದಾಜಿದ್ದಿಗೆ ಬಿದ್ದಂತೆ ಮೊಳಗುತ್ತಲೇ ಇದೆ. ರಾಜ್ಯ ಕಾಂಗ್ರೆಸ್ ಇಬ್ಭಾಗವಾಗಿದೆ, ಸಿದ್ದು-ಡಿಕೆಶಿ ಬಣ ರಾಜಕೀಯವೇ ಕಾಂಗ್ರೆಸ್ ವಿನಾಶಕ್ಕೆ ಕಾರಣ ಎಂದು ಬಿಜೆಪಿ ಟೀಕಿಸುತ್ತಿದ್ದೆ. ಇದೀಗ 'ಕರ್ನಾಟಕದಲ್ಲಿ ಕಾಂಗ್ರೆಸ್ನ ಮುಂದಿನ ಸಿಎಂ ಅಭ್ಯರ್ಥಿ ಯಾರು?' ಎಂಬ ಗೊಂದಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆರೆ ಎಳೆದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಶನಿವಾರ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್ನ ಸಿಎಂ ಅಭ್ಯರ್ಥಿ ಯಾರು? ಎಂದು ಪ್ರರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಚುನಾವಣೆ ನಂತರವೇ ಸಿಎಂ ಯಾರೆಂದು ನಿರ್ಧರಿಸಲಾಗುತ್ತೆ. ಸದ್ಯಕ್ಕೆ ಕಾಂಗ್ರೆಸ್ನ ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ ಎಂದು ಡಿಕೆಶಿ ಮತ್ತು ಸಿದ್ದು ಎದುರೇ ಸ್ಪಷ್ಟಪಡಿಸಿದರು. ಆ ಮೂಲಕ "ಮುಂದಿನ ಸಿಎಂ' ಯಾರೆಂಬ ವಿವಾದಕ್ಕೆ ತೆರೆ ಎಳೆದರು.