

ಬೆಂಗಳೂರು: ಮಳೆಗಾಲದ ಅಧಿವೇಶನದ ಮೊದಲ ದಿನವೇ ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬರುವ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡ, ಆ ನಂತರ ಸೈಕಲ್ ಏರಿ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಅಧಿವೇಶನದ ಕೊನೇ ದಿನವಾದ ಇಂದು(ಶುಕ್ರವಾರ) ಟಾಂಗಾ ಜಾಥಾ ಮಾಡಿ ಗಮನ ಸೆಳೆಯಿತು.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೂ ಟಾಂಗಾ ಜಾಥಾ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂಧನ ಮತ್ತು ದಿನಬಳಕೆ ವಸ್ತುಗಲ ಬೆಲೆ ಏರಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ ನಡೆಸುತ್ತಿರುವ ಡಿಕೆಶಿ, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್ ನೇತೃತ್ವದ ತಂಡ ಕೇಂದ್ರ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಟಾಂಗಾ ರ್ಯಾಲಿಯಲ್ಲಿ ಮಾತನಾಡಿದ ಡಿಕೆಶಿ, ಮಾನಮರ್ಯಾದೆ ಇಲ್ಲದ ಸರ್ಕಾರ ಇದು. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನ ಸಂಕಷ್ಟಕ್ಕೆ ದೂರಿದೆ. ಸರ್ಕಾರ ಜನರ ಹಣವನ್ನ ಲೂಟಿ ಮಾಡುತ್ತಿದೆ. ಈ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ. ರೈತರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ಈ ಕುರಿತು ಜನರ ಗಮನ ಸೆಳೆಯಲು ನಮ್ಮ ಹೋರಾಟ ಮುಂದುವರಿಯುತ್ತೆ. ಅಕ್ಟೋಬರ್ನಲ್ಲಿ ಗ್ರಾಮ ಮಟ್ಟದಲ್ಲೂ ಹೋರಾಟ ರೂಪಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ವಾಗ್ದಾಳಿ ನಡೆಸಿದ್ದು, ಇಂತಹ ಕೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಯೇ ಇಲ್ಲ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಜನರ ಹಾದಿ ತಪ್ಪಿಸುವುದೇ ಇವರ ಕೆಲಸ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆ ಮೂಲಕ ಬಿಜೆಪಿ ಸರ್ಕಾರ ಜನರ ಬದುಕನ್ನೇ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇದರ ವಿರುದ್ಧ ಅಕ್ಟೋಬರ್ 2ರಿಂದ ರಾಜ್ಯಾದ್ಯಂತ ತಿಂಗಳು ಪೂರ್ತಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.