

ಕುಶಾಲನಗರ: ಇಲ್ಲಿನ ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಶಾಲಾ ಮಕ್ಕಳ ರಾಜ್ಯ ಮಟ್ಟದ ಹಾಕಿ ಟೂರ್ನಿಗೆ ಬುಧವಾರ ವರ್ಣರಂಜಿತ ತೆರೆಬಿತ್ತು.
ಸುತ್ತಲೂ ಹಸಿರು ಪರಿಸರದಿಂದ ಕಂಗೊಳಿಸುತ್ತಿದ್ದ ಹಾಕಿ ಟರ್ಫ್ ಮೈದಾನದಲ್ಲಿ ರಾಜ್ಯ ಮಟ್ಟದ ಟೂರ್ನಿಯಿಂದ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡ ಕ್ರೀಡಾಪಟುಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಬೆಳಗ್ಗೆ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್. ಪಲ್ಲದ್, ಹಾಕಿಯ ತವರಾದ ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಕ್ರೀಡಾಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹ ಅನನ್ಯವಾದುದು. ಕೊಡಗಿನಲ್ಲಿ ಕಲೆ, ಸಾಂಸ್ಕೃತಿಕ ಪರಂಪರೆಯೊಂದಿಗೆ ಹಾಕಿ ಕ್ರೀಡೆ ಕೂಡ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ರಾಷ್ಟ್ರೀಯ 17ರ ವಯೋಮಾನದ ಬಾಲಕಿಯರ ಹಾಕಿ ಟೂರ್ನಿಯ ಯಶಸ್ವಿ ಸಂಘಟನೆಗೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದು ಹೇಳಿದರು.
ಕ್ರೀಡಾಶಾಲೆಯ ಮುಖ್ಯಶಿಕ್ಷಕ ಬಿ.ಟಿ.ದೇವಕುಮಾರ್ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ನಿರಂತರವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳುವುದು ಮುಖ್ಯ ಎಂದರು.
ಟೂರ್ನಿಯಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪದಕ ವಿತರಣೆ: ಟೂರ್ನಿಯಲ್ಲಿ ವಿಜೇತರಾದ ಕ್ರೀಡಾಳುಗಳಿಗೆ ಶಿಕ್ಷಕ ಬಿ.ಟಿ.ಪೂರ್ಣೇಶ್ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಪದಕಗಳನ್ನು ವಿತರಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್.ಸುಕುಮಾರಿ, ರಾಜ್ಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಎನ್.ಎಲ್. ಸುರೇಶ್ ಕುಮಾರ್ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಕ್ರೀಡಾಶಾಲೆಯ ತರಬೇತುದಾರ ಎ.ಸಿ.ದಿನಮಣಿ, ಟೂರ್ನಿಯ ತಾಂತ್ರಿಕ ವಿಭಾಗದ ಅಧಿಕಾರಿಗಳಾಗಿ ಕೆ.ಎಚ್.ಗಣೇಶ್‌ಕುಮಾರ್, ಪಿ.ಇ.ನಂದ, ಎನ್.ಎಲ್.ಸುರೇಶ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಲ್.ಸಂದೇಶ್, ಎನ್.ಡಿ.ಸೋಮಶೇಖರ್, ಎಚ್.ಎನ್.ರತೀಶ್, ಗಾನದ ಗಣಪತಿ, ನಾಗೇಶ್ ಈಶ್ವರ್, ದೇವಾನಂದ್, ಕೆ.ಎಚ್.ಗಾಯತ್ರಿ, ಶ್ರೀಕಲಾ, ಕೆ.ವಿಜಯಲಕ್ಷ್ಮೀ, ಜಿ.ಎಸ್.ಶೈಲಾ, ಎನ್.ಆಶಾ, ಸಿ.ಕೆ.ಭಾರತಿ, ಕಲಾವಿದ ಬರ್ಮಣ್ಣ ಬೆಟ್ಟಗೇರಿ ಇತರರು ಇದ್ದರು.
ಕ್ರೀಡಾಭಿಮಾನಿಗಳಲ್ಲಿ ಸಂತಸ: ಕೊಡಗು ಜಿಲ್ಲೆಯ ಕಿರಿಯ ಬಾಲಕರು ಮತ್ತು ಹಿರಿಯ ಬಾಲಕಿಯರ ವಿಭಾಗದ ಎರಡು ತಂಡಗಳು ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಗೊಂಡಿವೆ. 14ರ ವಯೋಮಾನದ ಬಾಲಕರ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗದಿಂದ ಗೋಣಿಕೊಪ್ಪ ಲಯನ್ಸ್ ಶಾಲಾ ತಂಡದ ಬಾಲಕರು ಹಾಗೂ 17ರ ವಯೋಮಾನದ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗದಿಂದ ಮಡಿಕೇರಿ ನಗರದ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ಬಾಲಕಿಯರ ತಂಡವು ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಗೊಂಡಿರುವುದು ಹಾಕಿ ಕ್ರೀಡೆಯ ತವರೆನಿಸಿದ ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.