

ನವದೆಹಲಿ: ಸಂಪುಟ ಪುನಾರಚನೆಗೆ ಯಾವುದೇ ಪಟ್ಟಿ ಸಿದ್ಧವಾಗಿಲ್ಲ. ನಾನು ಯಾವುದೇ ಹೆಸರುಗಳನ್ನು ಅಮಿತ್ ಷಾ ಅವರಿಗೆ ಕೊಟ್ಟಿಲ್ಲ. ಆದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಜತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುವುದಾಗಿ ಅಮಿತ್ ಷಾ ಅವರು ತಿಳಿಸಿದ್ದಾರೆ. ರಾಜ್ಯ ರಾಜಕೀಯದ ಸ್ಥಿತಿಗತಿ ಆಧರಿಸಿ ಬದಲಾವಣೆ ಆಗಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಅಮಿತ್ ಷಾ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಸಂಬಂಧ ದೆಹಲಿಯಲ್ಲಿ ಚರ್ಚೆ ಮಾಡೋಣ ಎಂದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರವೇ ದೆಹಲಿಗೆ ತೆರಳಿರುವ ಸಿಎಂ ಬೊಮ್ಮಾಯಿ, ಬುಧವಾರ ಅಮಿತ್ ಷಾ ಜತೆ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಪುಟ ವಿಸ್ತರಣೆಯೋ, ಪುನರಚನೆಯೋ ಎನ್ನುವ ಬಗ್ಗೆ ಚರ್ಚೆಯಾಗಿದೆ. ನಿನ್ನೆಯ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆಯೂ ಚರ್ಚೆಯಾಗಿದೆ. ನಡ್ಡಾ ಅವರ ಜತೆ ಮಾತನಾಡುತ್ತೇನೆ ಎಂದಿದ್ದಾರೆ. ಎರಡ್ಮೂರು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ನಾನು ಯಾರ ಹೆಸರನ್ನೂ ಅಮಿತ್ ಷಾ ಅವರಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಸಿಎಂ ದೆಹಲಿ ಭೇಟಿಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತೆ ಎಂಬ ಮಾತೂ ಕೇಳಿಬಂದಿತ್ತು. ಆದರೆ, ಈ ಬಗ್ಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.