

ಕೊಳ್ಳೇಗಾಲ: ಪಟ್ಟಣದ ಕಾರ್ನರ್ ಸ್ಟೋನ್ ಪಿಯು ಕಾಲೇಜಿನಲ್ಲಿ ಗುರುವಾರ ಪಟ್ಟಣ ಪೊಲೀಸ್ ಸಿಬ್ಬಂದಿ ’ಆಪ್ತ ಗೆಳತಿ ನಿಮ್ಮ ಬಳಿಗೆ’ ಕಾರ್ಯಕ್ರಮ ನಡೆಸಿ ಹೆಣ್ಣು ಮಕ್ಕಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಹೆಡ್ ಕಾನ್‌ಸ್ಟೇಬಲ್ ಮಂಗಳಮ್ಮ, ಕಾನ್‌ಸ್ಟೇಬಲ್ ಭಾಗ್ಯಾ, ಮಾಯಪ್ಪ, ಶಿವಮಂಜು, ಜಯಸೂರ್ಯ ಅವರು ವಿದ್ಯಾರ್ಥಿನಿಯರಿಗೆ ಆಪ್ತ ಗೆಳತಿ ಕಾರ್ಯ ಕ್ರಮ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಈ ವೇಳೆ ಕಾನ್‌ಸ್ಟೇಬಲ್ ಭಾಗ್ಯಾ ಮಾತನಾಡಿ ಹೆೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಲು ಹಾಗೂ ಹೆಣ್ಣು ಮಕ್ಕಳಿಗೆ ಸುರಕ್ಷಿತ ದೃಷ್ಟಿಯಿಂದ ಪೊಲೀಸ್ ಇಲಾಖೆ ಆಪ್ತ ಗೆಳತಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಈ ಬಗ್ಗೆ ಪ್ರತಿಯೊಬ್ಬ ಹೆಣ್ಣು ಮಗು ತಿಳಿದುಕೊಳ್ಳಬೇಕು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಪ್ತ ಗೆಳತಿ ಕಾರ್ಯಕ್ರಮದಡಿ ಕಾಲೇಜಿನಲ್ಲಿ ದೂರು ಪೆಟ್ಟಿಗೆ(ಪಿಂಕ್ ಬಾಕ್ಸ್ ) ಇರಿಸಲಾಗಿತ್ತದೆ. ಹೆಣ್ಣು ಮಕ್ಕಳು ತಮಗೆ ಯಾವುದೇ ಸಮಸ್ಯೆ ಇದ್ದರೂ ನಿರ್ಭಯವಾಗಿ ಪತ್ರ ಬರೆದು ಬಾಕ್ಸ್ ಒಳಗೆ ಹಾಕಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಪ್ರತಿವಾರದ ಶನಿವಾರ ದೂರು ಅರ್ಜಿಗಳನ್ನು ಸಂಗ್ರಹಿಸಿ ನಂತರ ಕ್ರಮ ವಹಿಸಲಾಗುತ್ತದೆ. ಹೆಣ್ಣು ಮಕ್ಕಳು ಈ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಅಲ್ಲದೆ, ಮಕ್ಕಳ ಕಳ್ಳ ಸಾಗಣೆ ಹಾಗೂ ಸೈಬರ್ ಕ್ರೈಮ್ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.