

ಸೊರಬ: ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರು ಮಹತ್ತರ ಪಾತ್ರವಹಿಸುತ್ತಾರೆ ಎಂದು ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಹೇಳಿದರು.
ಪಟ್ಟಣದ ಬಂಗಾರಪ್ಪ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪೌರ ಕಾರ್ಮಿಕರು, ನೀರು ಸರಬರಾಜು ಸಹಾಯಕರು, ಸಿಬ್ಬಂದಿಗೆ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಲ್ಲಿ ಕಾರ್ಮಿಕರು ಹೆಚ್ಚು ಶ್ರಮವಹಿಸುತ್ತಾರೆ. ಅವರಿಗೆ ಕ್ರೀಡಾಕೂಟ ಆಯೋಜಿಸಿರುವುದು ಒಳ್ಳೆಯದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ವಿ.ಚಂದನ್ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದಬಹುದು. ಪೌರ ಕಾರ್ಮಿಕರು ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಕ್ರೀಡಾಕೂಟದಲ್ಲಿ ಕಬಡ್ಡಿ, ಕ್ರಿಕೆಟ್, ಓಟ, ವಾಲಿಬಾಲ್ ಸೇರಿ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.
ಪುರಸಭೆ ಸದಸ್ಯರಾದ ಪ್ರಭು ಮೇಸ್ತ್ರಿ, ಅನ್ಸಾರ್ ಅಹ್ಮದ್, ರಂಜಿನಿ, ಅಫ್ರೀನ್, ಸಿಬ್ಬಂದಿ ಲಕ್ಷ್ಮೀನಾರಾಯಣ, ಶ್ರೀನಿವಾಸ್, ರಂಜಿತ್, ರಾಘವೇಂದ್ರ, ಶಿವಪ್ಪ, ಕಾರ್ತಿಕ್, ಪ್ರಕಾಶ್, ಹುಚ್ಚರಾಯಪ್ಪ, ನಾಗರಾಜ್, ಭಾಸ್ಕರ್ ವಿನೋದ್, ಕವನಾ, ಸ್ವಪ್ನಾ, ಜಯಶ್ರೀ, ಅನೂತ್, ರಾಧಮ್ಮ, ಮಂಜುಳಾ ಇತರರಿದ್ದರು.